ಪಂಜಾಬಿ ಗಾಯಕಿ ಅಪಹರಿಸಿ ಭೀಕರವಾಗಿ ಕೊಲೆ
ಲುಧಿಯಾನ: ಪಂಜಾಬಿ ಸಂಗೀತ ಲೋಕದ ಉದಯೋನ್ಮುಖ ಗಾಯಕಿ ಇಂದರ್ ಕೌರ್ ಉರ್ಫ್ ಯಶಿಂದರ್ ಕೌರ್ ಅವರನ್ನು ಬಂದೂಕು ತೋರಿಸಿ ಅಪಹರಿಸಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಪಹರಣಕ್ಕೊಳಗಾದ ಆರು ದಿನಗಳ ಬಳಿಕ ಲುಧಿಯಾನದ ನೀಲನ್ (ನೀಲೋ) ಕಾಲುವೆಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಕೆನಡಾದಿಂದ ಬಂದಿದ್ದ ಅನಿವಾಸಿ ಭಾರತೀಯನೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಮೃತರ ಸಹೋದರ ಜೋತಿಂದರ್ ಸಿಂಗ್ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಮೇ 13 ರ ಸಂಜೆ ಸುಮಾರು 8:30 ರ ವೇಳೆಗೆ ಇಂದರ್ ಕೌರ್ ಅವರು ದಿನಸಿ ಸಾಮಗ್ರಿಗಳನ್ನು ಖರೀದಿಸಲು ತಮ್ಮ ಫೋರ್ಡ್ ಫಿಗೊ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಆದರೆ ತಡ ರಾತ್ರಿಯಾದರೂ ಅವರು ಮನೆಗೆ ಮರಳಿ ಬಂದಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದಾಗ ಅಪಹರಣದ ಶಂಕೆ ವ್ಯಕ್ತವಾಗಿದೆ.
ಇಂದರ್ ಕೌರ್ ಅವರನ್ನು ಬಲವಂತವಾಗಿ ಮದುವೆಯಾಗಲು ಬಯಸಿದ್ದ ಭಾಲೂರ್ ನಿವಾಸಿ ಸುಖ್ವಿಂದರ್ ಸಿಂಗ್ ಎಂಬಾತನ ಮೇಲೆ ಕುಟುಂಬಸ್ಥರು ನೇರ ಅನುಮಾನ ವ್ಯಕ್ತಪಡಿಸಿದ್ದಾರೆ.
ಇಂದರ್ ಆತನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಇದೇ ದ್ವೇಷದಿಂದಾಗಿ ಕೆನಡಾದಲ್ಲಿದ್ದ ಸುಖ್ವಿಂದರ್ ಸಿಂಗ್, ಕೇವಲ ಇಂದರ್ ಕೌರ್ ತನಗೆ ದಕ್ಕಬೇಕೆಂಬ ಏಕೈಕ ಉದ್ದೇಶದಿಂದ ಪಂಜಾಬ್‌ಗೆ ಬಂದಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.





