ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕಾರ
ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ವಿಜಯ್ ಅವರು ಭಾನುವಾರ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಅಧಿಕಾರ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಜನಪರ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ.
ಚೆನ್ನೈನ ಜವಾಹರಲಾಲ್ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಪ್ರಮಾಣವಚನ ಸ್ವೀಕರಿಸಿದ ಬಳಿಕ ನನ್ನ ಹೃದಯದಲ್ಲಿ ನೆಲೆಸಿರುವ ಪ್ರೀತಿಯ ಜನರೇ.. ಎಂದು ಹೇಳುವ ಮೂಲಕ ರಾಜ್ಯದ ಜನತೆಯನ್ನುದ್ದೇಶಿಸಿ ಭಾವನಾತ್ಮಕವಾಗಿ ಭಾಷಣ ಆರಂಭಿಸಿದರು.
ಈ ಮಾತು ಕೇಳುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾವಿರಾರು ಅಭಿಮಾನಿಗಳು ಭಾರೀ ಹರ್ಷೋದ್ಗಾರ ವ್ಯಕ್ತಪಡಿಸಿದರು.
ಬಳಿಕ ಮಾತು ಮುಂದುವರೆಸಿದ ವಿಜಯ್ ಅವರು, ಇದು ಕೇವಲ ವಿಜಯ್ ಅವರ ಸರ್ಕಾರವಲ್ಲ, ಇದು ತಮಿಳುನಾಡಿನ ಪ್ರತಿಯೊಬ್ಬ ನಾಗರಿಕನ ಸರ್ಕಾರ. ನಾವೆಲ್ಲರೂ ಸೇರಿ ಹೊಸ ತಮಿಳುನಾಡನ್ನು ನಿರ್ಮಿಸೋಣ ಎಂದು ಹೇಳಿದರು.
ತಮಿಳುನಾಡಿನ ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದು ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು.
ಈ ನಡುವೆ ಸರ್ಕಾರದ ಆಡಳಿತದ ಹೊಣೆ ಹೊತ್ತ ತಕ್ಷಣವೇ ವಿಜಯ್ ಉಚಿತ ವಿದ್ಯುತ್ ಯೋಜನೆ (200 ಯೂನಿಟ್‌ಗಳವರೆಗೆ), ಮಹಿಳಾ ರಕ್ಷಣಾ ಪಡೆ ರಚನೆ ಹಾಗೂ ಪ್ರತಿ ಜಿಲ್ಲೆಯಲ್ಲಿ ಮಾದಕವಸ್ತು ವಿರೋಧಿ ದಳ ಸ್ಥಾಪನೆಗೆ ಸಂಬಂಧಿಸಿದ ಪ್ರಮುಖ ಕಡತಗಳಿಗೆ ಸಹಿ ಹಾಕಿದ್ದಾರೆ. ಜೊತೆಗೆ ರಾಜ್ಯದ ಜನತೆಗೆ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದಾರೆ.
ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯದ ಸುಮಾರು ರೂ.10 ಲಕ್ಷ ಕೋಟಿ ಸಾಲಭಾರವನ್ನು ಉಲ್ಲೇಖಿಸಿ, ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸುವುದಾಗಿ ಹೇಳಿದರು. “ಅಲ್ಲಿಂದ ಮುಂದೆ ನಾನು ರಾಜ್ಯವನ್ನು ಮುನ್ನಡೆಸಲು ಬಯಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಚುನಾವಣಾ ಭರವಸೆಗಳನ್ನು ಈಡೇರಿಸಲು ಜನರು ಸ್ವಲ್ಪ ಸಮಯ ನೀಡುವಂತೆ ಮನವಿ ಮಾಡಿದ ವಿಜಯ್, “ಇಂದಿನಿಂದ ಮಾದಕವಸ್ತು ಜಾಲವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಕಠಿಣ ಕ್ರಮ ಕೈಗೊಳ್ಳುತ್ತೇನೆ. ಮಹಿಳೆಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಶಿಕ್ಷಣ, ರಸ್ತೆ ಸುರಕ್ಷತೆ ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕೂ ಹೆಚ್ಚಿನ ಮಹತ್ವ ನೀಡುತ್ತೇನೆ ಎಂದು ಹೇಳಿದರು.
ನಾನು ತಪ್ಪು ಮಾಡುವುದಿಲ್ಲ, ನನ್ನ ಸಚಿವ ಸಂಪುಟದ ಸದಸ್ಯರೂ ತಪ್ಪು ಮಾಡಲು ಅವಕಾಶ ನೀಡುವುದಿಲ್ಲ. ಅಧಿಕಾರಕ್ಕೆ ಬಂದಿದ್ದೇವೆ ಎಂಬ ಕಾರಣಕ್ಕೆ ಯಾರಾದರೂ ದುರುಪಯೋಗದ ಚಿಂತನೆ ಹೊಂದಿದ್ದರೆ, ಅದನ್ನು ಈಗಲೇ ಮನಸ್ಸಿನಿಂದ ತೆಗೆದುಹಾಕಿ ಎಂದು ಎಚ್ಚರಿಕೆ ನೀಡಿದರು.
ತಮ್ಮ ಸರ್ಕಾರದಲ್ಲಿ ಹಲವು ಅಧಿಕಾರ ಕೇಂದ್ರಗಳಿಗೆ ಅವಕಾಶ ಇರುವುದಿಲ್ಲ. “ಇದು ಹೊಸ ಆರಂಭ. ನಿಜವಾದ, ಧರ್ಮನಿರಪೇಕ್ಷ ಸಾಮಾಜಿಕ ನ್ಯಾಯದ ಹೊಸ ಯುಗ ಈಗ ಆರಂಭವಾಗುತ್ತಿದೆಎಂದು ಘೋಷಿಸಿದರು.





