ವಿಟ್ಲ: ದ.ಕ.ಬೆಳೆಗಾರರ ಸಾವಯವ ಸಂಯುಕ್ತ ರೈತ ಉತ್ಪಾದಕ ಕಂಪನಿಯ ವಿಟ್ಲ ಶಾಖೆ ಉದ್ಘಾಟನೆ
ವಿಟ್ಲ: ದೇಶದ ಬೆನ್ನೆಲುಬು ಎಂದೇ ಪ್ರಸಿದ್ದಿ ಪಡೆದಿರುವ ರೈತರಿಗೆ,ರೈತರಿಂದ ನಡೆಸಲ್ಪಡುವ, ಅವರಿಗೆ ಬೇಕಾದಂತಹ ಅನುಕೂಲ ಒದಗಿಸುವುದು ಜೊತೆಗೆ ಸಾಲ ಸೌಲಭ್ಯ ಹಾಗೂ ಠೇವಣಿ ಭದ್ರತಾ ವ್ಯವಸ್ಥೆಯನ್ನೊಳಗೊಂಡ ಸಂಸ್ಥೆ, ಹೆಸರಾಂತ ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಇದರ ಸಹಸಂಸ್ಥೆ ದ.ಕ.ಬೆಳೆಗಾರರ ಸಾವಯವ ಸಂಯುಕ್ತ ರೈತ ಉತ್ಪಾದಕ ಕಂಪನಿಯ ಶಾಖೆಯು ಬಂಟ್ವಾಳ ತಾಲೂಕಿನ ವಿಟ್ಲ ಪಟ್ಟಣದ ಖಾದರ್ ಸಂಕೀರ್ಣದ ಮಹಡಿಯಲ್ಲಿ ಏ.10 ರಂದು ಅದ್ದೂರಿಯಾಗಿ ಶುಭಾರಂಭಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಚಿಂತಕ ಶ್ರೀಕೃಷ್ಣ ಉಪಾಧ್ಯಾಯ ಇವರು ದೀಪ ಪ್ರಜ್ವಲನೆ ನೆರವೇರಿಸೋ ಮೂಲಕ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು , ಉಭಯ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಅಲ್ವಿನ್ ಜೋಯಲ್ ನೊರೊನ್ಹಾ ಅವರ ಸಾಧನೆ ಪ್ರೇರಣದಾಯಕವಾಗಿದ್ದು, ಕೇವಲ ಐದು ವರ್ಷಗಳಲ್ಲಿ ಬರೋಬ್ಬರಿ 25 ಶಾಖೆಗಳನ್ನು ಪ್ರಾರಂಭಿಸಲು ನೀಡಿರುವಂತಹ ವೇಗ ಆದ್ಭುತವೆಂದು ಹೇಳಿದರು. 24 ಶಾಖೆಗಳ ಮೂಲಕ 15 ಸಾವಿರ ಗ್ರಾಹಕ ವರ್ಗವನ್ನು ಹೊಂದಿರುವುದು ಸಾಮಾನ್ಯವೇನಲ್ಲ. ಜನತೆಯ ಸಹಕಾರ ಸಿಗುತ್ತದೆಂಬ ಭಾವನೆ ಭರವಸೆಯಿಂದ ಇಲ್ಲಿ ಕಾಲಿಟ್ಟಿದ್ದಾರೆ. ಆರ್ಥಿಕ ವ್ಯವಹಾರದಲ್ಲಿ ಪ್ರಾಮಾಣಿಕ ಸೇವೆ ನೀಡುವುದು ಕೂಡ ದೇಶ ಸೇವೆಯೇ. ಬ್ಯಾಕಿಂಗ್ ಕ್ಷೇತ್ರದ ಮೂಲಕ ದಕ್ಷಿಣ ಕನ್ನಡ ಇಡೀ ದೇಶದಲ್ಲೇ ಅಸ್ತಿತ್ವ ಉಳಿಸಿಕೊಂಡಿರುವ ಜಿಲ್ಲೆಯು ಆಗಿದ್ದು, ನೂತನ ಸಂಸ್ಥೆಯ ವ್ಯವಹಾರ ಅತ್ಯುತ್ತಮ ರೀತಿ ಸಾಗಲಿಯೆಂದು ಅವರು ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ ಎಸ್ ಮಹಮ್ಮದ್ ಮಾತನಾಡಿ, ದ.ಕ ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳಿಗಿಂತ ಸಹಕಾರಿ ಬ್ಯಾಂಕ್‌ಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಳ ಕಾಣುತ್ತಿವೆ. ಜನಸಾಮಾನ್ಯರ ಕಷ್ಟ, ಸಮಸ್ಯೆಗಳಿಗೆ ತ್ವರಿತವಾಗಿ ಸಹಾಯ , ಸ್ಪಂದನೆ, ಸಹಕಾರ ನೀಡುತ್ತಿರುವಂಥದ್ದು ಕಾರಣ ಎಂದು ಹೇಳಿದ ಅವರು, ವೇಗವಾಗಿ ಬೆಳೆಯುತ್ತಿರುವ ವಿಟ್ಲ ಪಟ್ಟಣವನ್ನು ನಾವೆಲ್ಲರೂ ಸೇರಿಕೊಂಡು ವಿಟ್ಲ ತಾಲೂಕು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡೋಣವೆಂದು ತಿಳಿಸಿದರು.
ಕಚೇರಿ ಉದ್ಘಾಟನೆಯನ್ನು ಆಡಳಿತ ನಿರ್ದೇಶಕರಾದ ಆಲ್ವಿನ್ ನೊರೊನ್ಹಾ,ಲೇಝಿ ಡಿಸೋಜಾ ದಂಪತಿ ಅತಿಥಿಗಳ ಜೊತೆಗೂಡಿ ನೆರವೇರಿಸಿದರು. ಮನ್ಮಥ ಶೆಟ್ಟಿ ಶಾಖೆಯ ಒಳಾಂಗಣದಲ್ಲಿ ದೀಪ ಪ್ರಜ್ವಲನೆ ನೆರವೇರಿಸಿದರು.

ವಿಟ್ಲ ಸುರಕ್ಷಾ ಹೆಲ್ತ್ ಸೆಂಟರಿನ ವೈದ್ಯರಾದ ಡಾ. ಗೀತ ಪ್ರಕಾಶ್, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು, ಖಾದರ್ ಸಂಕೀರ್ಣ ಮಾಲೀಕ ರಶೀದ್, ರಹೀಮ್ ಕುಂಡಡ್ಕ, ರಮಾನಾಥ ವಿಟ್ಲ ಬಾಬು ಕೆ. ವಿಟ್ಲ ಹಾಗೂ ಸತೀಶ್ ನಾಯಕ್ ಮತ್ತು ವಿಟ್ಲ ಶಾಖೆಯ ಅಧ್ಯಕ್ಷ ಪುನೀತ್ ವಿಜೆ, ಉಪಾಧ್ಯಕ್ಷ ಮಹೇಶ್ ಕನ್ಯಾನ ವೇದಿಕೆಯಲ್ಲಿ ಇದ್ದರು. ಸಿಬ್ಬಂದಿ ಪುನೀತ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆ ಬಳಿಕ ಅತಿಥಿಗಳನ್ನು ಗೌರವಿಸಲಾಯಿತು. ಬಿಂದು ಶ್ರೀ, ಜ್ಯೋತಿ ಪ್ರಾರ್ಥನೆ ನೆರವೇರಿಸಿದರು.
ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು. ಪುನೀತ್ ವಿಜೆ ವಂದಿಸಿದರು.




