ಯುವತಿಯನ್ನು ಕೊಂದು ಶವವನ್ನು ಪೆಟ್ಟಿಗೆಯಲ್ಲಿ ತುಂಬಿ ನೀರಿನ ಟ್ಯಾಂಕ್‌ಗೆ ಎಸೆದ ಪ್ರಿಯಕರ
ಮಧ್ಯಪ್ರದೇಶ: ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವತಿಯನ್ನು ಆಕೆಯ ಸಂಗಾತಿಯೇ ಕೊಲೆ ಮಾಡಿ, ಶವವನ್ನು ಪೆಟ್ಟಿಗೆಯಲ್ಲಿ ತುಂಬಿ ನೀರಿನ ಟ್ಯಾಂಕ್‌ಗೆ ಎಸೆದಿರುವ ಮನಕಲಕುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಭೋಪಾಲ್‌ನ ಕಮಲಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಕ್ಸ್ ಘರಾ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿರುವ ನೀರಿನ ಟ್ಯಾಂಕ್‌ನಲ್ಲಿ ಶವ ಪತ್ತೆಯಾಗಿದೆ. ಕಳೆದ ವಾರಾಂತ್ಯದಲ್ಲಿ ಈ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ.
ಆರೋಪಿಯು ಯುವತಿಯನ್ನು ಕೊಂದ ನಂತರ ಒಂದು ದಿನದ ಕಾಲ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದನು. ಬಳಿಕ ತನ್ನ ತಾಯಿ, ಸಹೋದರ ಹಾಗೂ ಸಹೋದರಿಯ ನೆರವಿನಿಂದ ಮನೆಯಿಂದ 200 ಮೀಟರ್ ದೂರದಲ್ಲಿರುವ ನೀರಿನ ಟ್ಯಾಂಕ್‌ಗೆ ಎಸೆದಿದ್ದಾರೆ. ಶವ ತೇಲದಂತೆ ಪೆಟ್ಟಿಗೆಯ ಒಳಗೆ ಕಲ್ಲುಗಳನ್ನು ತುಂಬಲಾಗಿತ್ತು ಎಂದು ಹೇಳಲಾಗಿದೆ.
ಫೆಬ್ರವರಿ 12ರ ಗುರುವಾರ ಸಂಜೆ ಟ್ಯಾಂಕ್‌ನಿಂದ ಕೆಟ್ಟ ವಾಸನೆ ಬರಲಾರಂಭಿಸಿದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸುಮಾರು 10 ಅಡಿ ಆಳದ ಟ್ಯಾಂಕ್‌ನಿಂದ ಶವವನ್ನು ಹೊರತೆಗೆದಿದ್ದಾರೆ.




