ಪುತ್ತೂರು: 1 ಕ್ವಿಂಟಾಲ್ ಗಾಂಜಾ ಪತ್ತೆ ಪ್ರಕರಣ: ಪ್ರಕರಣದ ಕಿಂಗ್ ಪಿನ್ ಒರಿಸ್ಸಾ ರಾಜ್ಯದ ವ್ಯಕ್ತಿ ಸಹಿತ ಮೂವರ ಬಂಧನ
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ:19-01-2026 ರಂದು ರೂ.53,03,000/- ಮೌಲ್ಯದ 1 ಕ್ವಿಂಟಾಲ್ 6 ಕೆ.ಜಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ಮುಂದುವರಿಸಿದ್ದ ಪೊಲೀಸರು ಗಾಂಜಾ ಖದೀಮರ ಕಿಂಗ್ ಪಿನ್ ಹಾಗೂ ಹಣ ಮತ್ತು ವಾಹನದ ವ್ಯವಸ್ಥೆ ಮಾಡಿದ್ದ ಆರೋಪಿಗಳಿಗಾಗಿ ಬಲೆ ಬೀಸಿದ್ದರು.
ಈ ಸಂಬಂಧ ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಮಹಮ್ಮದ್ ಫಯಾಜ್ ಡಿ ಕೆ (27) ಹಾಗೂ ಬೆಳ್ತಂಗಡಿ ಕಕ್ಕಿಂಜೆ ನಿವಾಸಿ ನಝಿರ್ (42) ಎಂಬವರನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಗೆ ಮಾದಕವಸ್ತು ಗಾಂಜಾವನ್ನು ಪೂರೈಕೆ ಮಾಡುತ್ತಿದ್ದ ಒರಿಸ್ಸಾ ರಾಜ್ಯದ ದೀಪಕ್ ಪಾತ್ರ (37) ಎಂಬಾತನನ್ನು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್ ರವರ ನೇತೃತ್ವದ ತನಿಖಾ ತಂಡವು ಒರಿಸ್ಸಾ ರಾಜ್ಯಕ್ಕೆ ತೆರಳಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಸಂದರ್ಭ ಆತನಿಂದ ರೂ 80,೦00/- ಮೌಲ್ಯದ, 1 ಕೆ.ಜಿ 788 ಗ್ರಾಂ ಗಾಂಜಾವನ್ನು ಮತ್ತೆ ವಶಕ್ಕೆ ಪಡೆಯಲಾಗಿರುತ್ತದೆ.
ಸದ್ರಿ ಕಾರ್ಯಾಚರಣೆಯಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್ ರವರು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಗುಣಪಾಲ ಜೆ ರವರು ಹಾಗೂ ಸಿಬ್ಬಂದಿಗಳಾದ ದೇವರಾಜ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಸುಬ್ರಮಣಿ, ಭೀಮಸೆನ್, ಸುರೇಶ ಹಾಗೂ ದಿವ್ಯಾಪ್ರಕಾಶ್ ರವರುಗಳನ್ನು ಒಳಗೊಂಡ ತಂಡ ಭಾಗಿಯಾಗಿರುತ್ತಾರೆ.
ಗಾಂಜಾ ಖದೀಮರ ಹಿಡಿದು ಬೇರು ಸಹಿತ ಕಿತ್ತೊಗೆಯಲು ಮುಂದಾದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.




