ಉಳ್ಳಾಲ: ಸಮುದ್ರ ಪಾಲಾಗಿದ್ದ ಕಾಲೇಜು ವಿದ್ಯಾರ್ಥಿಯ ಮೃತದೇಹ ಪತ್ತೆ
ಉಳ್ಳಾಲ: ಉಳ್ಳಾಲ ತಾಲೂಕಿನ ಸೋಮೇಶ್ವರದ ಪೆರಿಬೈಲ್ ಬೀಚ್‌ನಲ್ಲಿ ಶನಿವಾರ ಸಂಜೆ ನೀರಾಟಕ್ಕೆ ಇಳಿದು ಸಮುದ್ರ ಪಾಲಾಗಿದ್ದ ಕಾಲೇಜು ವಿದ್ಯಾರ್ಥಿ ಶೋಭಿತ್ ಎಂ.ಗೌಡ (18) ಅವರ ಮೃತದೇಹ ಭಾನುವಾರ ಮಧ್ಯಾಹ್ನ ಪೆರಿಬೈಲ್ ಕಡಲತೀರದ ಬಳಿ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿ ಶೋಭಿತ್ ಗೌಡ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿಯಾಗಿದ್ದು, ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು.ಉಜಿರೆ ಎಸ್‌ಡಿಎಂ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳ ತಂಡವು ಶನಿವಾರದಂದು ಕುತ್ತಾರಿನ ಶ್ರೀ ಕೊರಗಜ್ಜ ಕ್ಷೇತ್ರಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿತ್ತು. ಬಳಿಕ ಸಂಜೆ ವೇಳೆ ಕಾಲ ಕಳೆಯಲು ಸೋಮೇಶ್ವರದ ಪೆರಿಬೈಲ್ ಬೀಚ್‌ಗೆ ತೆರಳಿದ್ದರು. ಈ ವೇಳೆ ತಂಡದಲ್ಲಿದ್ದ ಶೋಭಿತ್ ಮತ್ತು ಆಕಾಶ್ ಎಂಬ ಇಬ್ಬರು ವಿದ್ಯಾರ್ಥಿಗಳು ಸಮುದ್ರದಲ್ಲಿ ನೀರಾಟವಾಡಲು ಇಳಿದಿದ್ದಾರೆ.
ಆದರೆ, ಕಡಲ ರಭಸದ ಅಲೆಗಳಿಗೆ ಸಿಲುಕಿ ಇಬ್ಬರೂ ಕೊಚ್ಚಿಹೋಗಿದ್ದರು. ಈ ಪೈಕಿ ಆಕಾಶ್ ಕಷ್ಟಪಟ್ಟು ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದರೆ, ಶೋಭಿತ್ ಸಮುದ್ರದ ಆಳಕ್ಕೆ ಕೊಚ್ಚಿಹೋಗಿದ್ದರು. ಉಳಿದ 7 ಮಂದಿ ವಿದ್ಯಾರ್ಥಿಗಳು ದಡದಲ್ಲೇ ಇದ್ದ ಕಾರಣ ಸುರಕ್ಷಿತವಾಗಿದ್ದರು. ಘಟನೆ ನಡೆದ ತಕ್ಷಣದಿಂದಲೇ ಎಸ್‌ಡಿಆರ್‌ಎಫ್, ಕರಾವಳಿ ಕಾವಲು ಪಡೆ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಶನಿವಾರ ತಡರಾತ್ರಿವರೆಗೂ ಹುಡುಕಾಟ ನಡೆಸಿದರೂ ವಿದ್ಯಾರ್ಥಿಯ ಸುಳಿವು ಲಭಿಸಿರಲಿಲ್ಲ.
ತದನಂತರ, ಭಾನುವಾರ ಮಧ್ಯಾಹ್ನದ ವೇಳೆ ‘ಉಳ್ಳಾಲ ವಲಯ ನಾಡ ದೋಣಿ ಹಾಗೂ ಗಿಲ್ನೆಟ್ ಮೀನುಗಾರರ ಸಂಘ’ದ ಪ್ರಮುಖರಾದ ಆಸಿಫ್ ಎಂ.ಬಿ., ನಿಝಾಮ್ ಕೋಟೆಪುರ, ನಝೀರ್ ಕೋಡಿ, ರಝಾಕ್ ಕೋಟೆಪುರ, ಮುಸ್ತಫಾ ಕೋಟೆಪುರ ಮತ್ತು ಇರ್ಫಾನ್ ಕೋಟೆಪುರ ಅವರು ನಾಡ ದೋಣಿಯಲ್ಲಿ ಸಮುದ್ರಕ್ಕಿಳಿದು ಕಾರ್ಯಾಚರಣೆ ನಡೆಸಿದರು. ಈ ವೇಳೆ ಉಚ್ಚಿಲ ಪೆರಿಬೈಲ್ ಸಮುದ್ರದಲ್ಲಿ ಶೋಭಿತ್ ಅವರ ಮೃತದೇಹ ಪತ್ತೆಯಾಗಿದೆ. ಮೀನುಗಾರರು ಮೃತದೇಹವನ್ನು ನಾಡ ದೋಣಿಯಲ್ಲೇ ಕೋಟೆಪುರ ಸಮುದ್ರ ತೀರಕ್ಕೆ ತಂದಿದ್ದು, ಉಳ್ಳಾಲ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






