January 31, 2026

ಮನರೇಗಾ ವಾಪಸ್ಸಾತಿಗೆ ಆಗ್ರಹಿಸಿ ಕೊಳ್ನಾಡಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

0
image_editor_output_image1947918838-1769575314732

ಮಯು.ಪಿ.ಎ ಸರಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆಯಾದ ಮನರೇಗಾ ಯೋಜನೆಯ ಹೆಸರು ಹಾಗೂ ಮೂಲ ಸ್ವರೂಪವನ್ನು ಬದಲಾಯಿಸಿ, ಯೋಜನೆಯನ್ನು ದುರ್ಬಲಗೊಳಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನವಿರೋದಿ ಧೋರಣೆಯನ್ನು ಖಂಡಿಸಿ, ಕೊಳ್ನಾಡು ವಲಯ ಕಾಂಗ್ರೆಸ್ ವತಿಯಿಂದ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು, “ಕೃಷಿಕರು ತಮ್ಮ ಸ್ವಂತ ಜಮೀನಿನಲ್ಲಿ ಬಾವಿ, ಹೈನುಗಾರಿಕೆ, ತೋಟ ನಿರ್ಮಾಣ, ಎಡೆಸಸಿ ಮುಂತಾದ ಕೆಲಸಗಳ ಮೂಲಕ ಸ್ವತಃ ಉದ್ಯೋಗ ನಿರ್ಮಿಸಿಕೊಂಡು ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಅವಕಾಶ ನೀಡಿದ ಏಕೈಕ ಯೋಜನೆ ಉದ್ಯೋಗ ಖಾತ್ರಿ ಯೋಜನೆ” ಎಂದು ಹೇಳಿದರು.

ಕೊಳ್ನಾಡು ಗ್ರಾಮವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣ, ಸಾಲೆತ್ತೂರು–ನವಪೇಟೆ ರಸ್ತೆ ನಿರ್ಮಾಣ, ಅಂಗನವಾಡಿ ಕಟ್ಟಡಗಳು, ಶಾಲೆಗಳ ತಡೆಗೋಡೆ, ಕಿಂಡಿ ಅಣೆಕಟ್ಟು, ತೋಡುಗಳಿಗೆ ತಡೆಗೋಡೆ ಹಾಗೂ ರಾಷ್ಟ್ರದ ಗಮನ ಸೆಳೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುರಿಬೈಲ್‌ನಲ್ಲಿ ವಾರ್ಷಿಕ ಸುಮಾರು 4 ಲಕ್ಷ ರೂಪಾಯಿ ಆದಾಯ ತರುವ ತೋಟ ನಿರ್ಮಾಣ—ಎಲ್ಲವೂ ಮನರೇಗಾ ಯೋಜನೆಯಿಂದಲೇ ಸಾಧ್ಯವಾಗಿದೆ ಎಂದು ಹೇಳಿದರು.
ಇಂತಹ ಜನಪರ ಹಾಗೂ ಬಡವರ ಬದುಕಿಗೆ ಆಸರೆಯಾದ ಯೋಜನೆಯನ್ನು ರದ್ದುಪಡಿಸುವ ಉದ್ದೇಶ ಕೇಂದ್ರ ಸರಕಾರಕ್ಕೆ ನಾಚಿಕೆಯಾಗಬೇಕು. ಯು.ಪಿ.ಎ ಸರಕಾರ ಬಡವರಿಗೆ 100 ದಿನಗಳ ಕೆಲಸ ನೀಡಿ ಜನಸ್ನೇಹಿ ಸರಕಾರವಾಗಿತ್ತು. ಎಂದು ತಿಳಿಸಿದರು.

ನಂತರ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಅವರು, ದೇಶದ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ, ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಹಾಗೂ ಕೃಷಿಕರಿಗೆ ನೇರವಾಗಿ ಲಕ್ಷಾಂತರ ರೂಪಾಯಿ ಆದಾಯ ತರುವ ಶಕ್ತಿ ಹೊಂದಿರುವ ಯೋಜನೆ ಎಂದರೆ ಅದು ಉದ್ಯೋಗ ಖಾತ್ರಿ ಯೋಜನೆ ಮಾತ್ರ ಎಂದು ಹೇಳಿದರು. ಹಳ್ಳಿಗಳ ರಸ್ತೆ, ನೀರು ಸಂರಕ್ಷಣೆ, ಕೃಷಿ ಆಧಾರಿತ ಉದ್ಯೋಗ, ಸ್ವಂತ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳು—ಎಲ್ಲವೂಈ ಯೋಜನೆಯ ಫಲವಾಗಿ ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಈ ಐತಿಹಾಸಿಕ ಯೋಜನೆಯನ್ನು ಜಾರಿಗೆ ತಂದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರ ಹಾಗೂ ಅದರ ಅಧ್ಯಕ್ಷೆಯಾಗಿದ್ದ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಅವರು ಸ್ಮರಿಸಿದರು. ಜೊತೆಗೆ ದೇಶದ ಆರ್ಥಿಕ ವ್ಯವಸ್ಥೆಗೆ ದೃಢವಾದ ಮುನ್ನುಡಿ ಬರೆದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ನೆನಪಿಸಿ, ಬಡವರ ಬದುಕಿಗೆ ಆಸರೆಯಾದ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ದೇಶದ ಜನತೆ ಒಪ್ಪುವುದಿಲ್ಲ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕೊಳ್ನಾಡು ವಲಯ ಕಾಂಗ್ರೆಸ್ ಅದ್ಯಕ್ಷರಾದ ಪವಿತ್ರ ಪೂಂಜಾ,ಕೊಳ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷರಾದ ಅಶ್ರಪ್ ಕೆ.ಸಾಲೆತ್ತೂರು,ಉಪಾದ್ಯಕ್ಷರಾದ ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ,ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಹಮೀದ್ ಸುರಿಬೈಲ್,ಶ್ರೀಮತಿ ಸವಿತಾ,ಶ್ರಿಮತಿ ಸುಲೋಚನಾ ರೈ,ಮಾಜಿ  ಅದ್ಯಕ್ಷರಾದ ಜೆರ್ಮಿ ಡಿಸೋಜಾ,ಮಾಜಿ ಸದಸ್ಯರಾದ ಮಹಮ್ಮದ್ ಕಟ್ಟೆ,ಯುವ ಕಾಂಗ್ರೇಸ್ ಮುಖಂಡ ಹಪೀಝ್ ಸಾಲೆತ್ತೂರು,ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಪ್ರದಾನ ಕಾರ್ಯದರ್ಶಿ ಜಾನ್ ಡಿಸೋಜಾ,ಪಾಣೆಮಂಗಳೂರು ಬ್ಲಾಕ್ ಕಿಸಾನ್ ಘಟಕದ ಅದ್ಯಕ್ಷರಾದ ಸೋಮಸೇಖರ ಗೌಡ ತಾಳಿತ್ತನೂಜಿ,ವಲಯ ಕಾಂಗ್ರೆಸ್ ಪಕ್ಷದ ಮುಖಂಡರು, ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಮನರೇಗಾ ಯೋಜನೆಯನ್ನು ಮೂಲ ಸ್ವರೂಪದಲ್ಲೇ ಮುಂದುವರಿಸುವಂತೆ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ನಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೂಲಕ ಸಂಭಂದಪಟ್ಟವರಿಗೆ ಮನವಿ ಸಲ್ಲಿಸಲಾಯಿತು

Leave a Reply

Your email address will not be published. Required fields are marked *

error: Content is protected !!