ಕೋಡಿಬೆಂಗ್ರೆ ಬೀಚ್: ವಿಹಾರಕ್ಕೆ ಕೊಂಡೊಯ್ಯುತ್ತಿದ್ದ ದೋಣಿ ಪಲ್ಟಿ: ಇಬ್ಬರು ಪ್ರವಾಸಿಗರು ಸಾವು
ಉಡುಪಿ: ಪ್ರವಾಸಿಗರನ್ನು ವಿಹಾರಕ್ಕೆ ಕೊಂಡೊಯ್ಯುತ್ತಿದ್ದ ದೋಣಿಯೊಂದು ಪಲ್ಟಿಯಾದ ಪರಿಣಾಮ ದೋಣಿಯಲ್ಲಿದ್ದ ಪ್ರವಾಸಿಗರ ಪೈಕಿ ಇಬ್ಬರು ಪ್ರವಾಸಿಗರು ಸಾವನಪ್ಪಿದ ಘಟನೆ ಕೋಡಿಬೆಂಗ್ರೆ ಬೀಚ್ ಸಮೀಪ ಮಧ್ಯಾಹ್ನ ಸಂಭವಿಸಿದೆ.
ಶಂಕರಪ್ಪ (22), ಸಿಂಧು (23) ಮೃತರು. ದೀಶಾ (26) ಎಂಬವರ ಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಧರ್ಮರಾಜ (26) ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಇವರು ಮೈಸೂರು ಜಿಲ್ಲೆಯ ಸರಸ್ವತೀಪುರಂ ಮೂಲದವರಾಗಿದ್ದು, ಅಲ್ಲಿನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರು ಎನ್ನಲಾಗಿದೆ.
ಒಟ್ಟು 14 ಮಂದಿಯ ತಂಡ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಇವರು ಕೋಡಿಬೆಂಗ್ರೆ ಡೆಲ್ಟಾ ಬೀಚ್‌ನಿಂದ ಪ್ರವಾಸಿ ದೋಣಿ ಸಮುದ್ರದಲ್ಲಿ ವಿಹಾರಕ್ಕೆ ಹೊರಟಿದ್ದರು. ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಹಂಗಾರಕಟ್ಟೆ ಶಿಪ್ ಬಿಲ್ಡಿಂಗ್ ಪ್ರದೇಶದ ಸಮೀಪ ನದಿ-ಸಮುದ್ರ ಸೇರುವ ಸ್ಥಳದಲ್ಲಿ ದೋಣಿ ಅಕಸ್ಮಿಕವಾಗಿ ಪಲ್ಟಿಯಾಯಿತು.
ಇದರಿಂದ ದೋಣಿಯಲ್ಲಿದ್ದ 14 ಮಂದಿ ಸಮುದ್ರದ ನೀರಿಗೆ ಬಿದ್ದರು. ಇವರಲ್ಲಿ ಕೆಲವರು ಮಾತ್ರ ಲೈಫ್‌ಜಾಕೆಟ್ ಧರಿಸಿದ್ದರೆನ್ನಲಾಗಿದೆ. ಕೂಡಲೇ ಇತರ ದೋಣಿಯವರು ನೀರಿಗೆ ಬಿದ್ದವರನ್ನು ರಕ್ಷಿಸಿ ತೀರಕ್ಕೆ ಕರೆದುಕೊಂಡು ಬಂದಿದ್ದು, ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಇವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಿದ್ದು, ಅವರಲ್ಲಿ ಇಬ್ಬರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.




