ಬಂಟ್ವಾಳ: ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಕಾರಕಲಾದ ಕಾರು
ಬಂಟ್ವಾಳ: ಬಂಟ್ವಾಳ-ಎಡಪದವು ರಾಜ್ಯ ಹೆದ್ದಾರಿಯ ಮುತ್ತೂರು ಸಮೀಪದ ನೂದೊಟ್ಟು ಎಂಬಲ್ಲಿ ಬುಧವಾರ ಮುಂಜಾನೆ ಚಲಿಸುತ್ತಿದ್ದ ಕಾರೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಎಡಪದವು ನಿವಾಸಿ ಧೀರೇಶ್ ಎಂಬವರು ತಮ್ಮ ಕುಟುಂಬದೊಂದಿಗೆ ಬಂಟ್ವಾಳದಿಂದ ಎಡಪದವು ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಮೂಲರಪಟ್ಣ ಸೇತುವೆಯ ಸಮೀಪ ತಲುಪಿದಾಗ ಹೆಡ್‌ಲೈಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ನೂದೊಟ್ಟು ಎಂಬ ಪ್ರದೇಶಕ್ಕೆ ಬರುತ್ತಿದ್ದಂತೆ ಕಾರಿನ ಮುಂಭಾಗದಿಂದ ಹೊಗೆ ಬರಲಾರಂಭಿಸಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣ ಕಾರನ್ನು ನಿಲ್ಲಿಸಿ, ಕಾರಿನಲ್ಲಿದ್ದವರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಎಲ್ಲರೂ ಇಳಿಯುತ್ತಿದ್ದಂತೆ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಇಡೀ ವಾಹನಕ್ಕೆ ವ್ಯಾಪಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಹಾಗೂ ಹತ್ತಿರದ ಮನೆಗಳಿಂದ ನೀರು ತಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೂ ಬೆಂಕಿಯ ಕೆನ್ನಾಲಿಗೆಗೆ ಕಾರಿನ ಅರ್ಧದಷ್ಟು ಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಭಾರೀ ನಷ್ಟ ಸಂಭವಿಸಿದೆ.




