ಉಡುಪಿ: ಮನೆಗಳ್ಳತನ ಪ್ರಕರಣದ ಆರೋಪಿಯ ಬಂಧನ
ಉಡುಪಿ : ಕಾಪುವಿನಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಭಾರತದ ಕುಖ್ಯಾತ ಕಳ್ಳನನ್ನು ಬಂಧಿಸಲಾಗಿದೆ. ಕಾಪು ಮಲ್ಲಾರು ಮೂಲದ 47 ವರ್ಷದ ಉಮೇಶ್ ಬಳೆಗಾರ ಅಲಿಯಾಸ್ ಉಮೇಶ್ ರೆಡ್ಡಿ ಬಂಧಿತ ಕಳ್ಳ. ಆತನಿಂದ 55 ಗ್ರಾಂನ ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ.
ಈತ ಡಿಸೆಂಬರ್ 4 ರಂದು ಮಲ್ಲಾರು ಗ್ರಾಮದ ರಾಘವೇಂದ್ರ ಕಿಣಿ ಎಂಬವರ ಮನೆಯಲ್ಲಿ ಕಳವುಗೈದಿರುವ ಬಗ್ಗೆ ವಿಚಾರಣೆ ವೇಳೆ ಬಾಯ್ದಿಟ್ಟಿದ್ದಾನೆ. ಕದ್ದ ಚಿನ್ನಾಭರಣಗಳನ್ನು ತಮಿಳುನಾಡು ರಾಜ್ಯದ ಮಧುರೈನಲ್ಲಿ ಮಾರಾಟ ಮಾಡಿದ್ದ ಎಂಬುದನ್ನು ತನಿಖೆ ವೇಳೆ ಹೇಳಿದ್ದಾನೆ. ಹೀಗಾಗಿ ಉಮೇಶ್ ಬಳೆಗಾರನನ್ನು ಕರೆದುಕೊಂಡು ಮಧುರೈಗೆ ತೆರಳಿ ಆತ ಕಳವು ಮಾಡಿದ ಚಿನ್ನಾಭರಣಗಳನ್ನು ಪತ್ತೆ ಹಚ್ಚಿ 55 ಗ್ರಾಂನ ಚಿನ್ನದ ಗಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.




