1 ವರ್ಷ ರಾಯಚೂರಿಗೆ ಗಡಿಪಾರು ಆದೇಶದ ವಿರುದ್ದ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೊರೆ
ಬೆಂಗಳೂರು: ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ವರ್ಷಗಳ ಕಾಲ ರಾಯಚೂರಿಗೆ ಗಡಿಪಾರು ಮಾಡಿರುವ ದಕ್ಷಿಣಕನ್ನಡ ಜಿಲ್ಲಾಡಳಿತದ ಆದೇಶದ ವಿರುದ್ದ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಆರೋಪದಡಿ ತಿಮರೋಡಿ ಅವರನ್ನು 2025ರ ಸೆಪ್ಟೆಂಬರ್ 18ರಂದು ಗಡಿಪಾರು ಮಾಡಿ ಆದೇಶಿಸಲಾಗಿತ್ತು. ಆ ಆದೇಶವನ್ನು ಹೈಕೋರ್ಟ್ 2025ರ ನವೆಂಬರ್ 17ರಂದು ರದ್ದುಪಡಿಸಿತ್ತು. ಅಂತೆಯೇ, ಪ್ರಕರಣವನ್ನು ಪುತ್ತೂರು ಉಪ ವಿಭಾಗಾಧಿಕಾರಿಗೆ ಹಿಂದಿರುಗಿಸಿದ್ದ ನ್ಯಾಯಪೀಠ, ‘ತಿಮರೋಡಿ ವಿವರಣೆ ಪಡೆದು ನಂತರ ಹೊಸದಾಗಿ ಆದೇಶ ಮಾಡಬೇಕು’ ಎಂದು ಉಪ ವಿಭಾಗಾಧಿಕಾರಿಗೆ ಆದೇಶಿಸಿತ್ತು.
ತಿಮರೋಡಿ ಅಹವಾಲು ಆಲಿಸಿದ ಉಪ ವಿಭಾಗಾಧಿಕಾರಿ, ತಿಮರೋಡಿ ಅವರನ್ನು 2025ರ ಡಿಸೆಂಬರ್ 16ರಿಂದ 2026ರ ಸೆಪ್ಟೆಂಬರ್ 16ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ಸರಹದ್ದಿಗೆ ಒಳಪಟ್ಟಂತೆ ಗಡಿಪಾರು ಮಾಡಿ ಡಿಸೆಂಬರ್ 16ರಂದು ಆದೇಶಿಸಿದ್ದರು.




