ಬಂಟ್ವಾಳ: ಪೊಲೀಸ್ ಇಲಾಖೆಯ ಸಿಬ್ಬಂದಿ ಚಲಾಯಿಸುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ: ಸವಾರ ತ್ವಾಹ ಇಮ್ರಾನ್ ಮೃತ್ಯು
ಬಂಟ್ವಾಳ: ರಾಜ್ಯ ಹೆದ್ದಾರಿಯ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಕಟ್ಟೆಮನೆ ಎಂಬಲ್ಲಿ ನ್ಯಾನೋ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಕಾರಣವಾದ ನ್ಯಾನೋ ಕಾರಿನೊಳಗೆ ಶೇಂದಿ ಬಾಟಲಿ ಮತ್ತು ಪೊಲೀಸ್ ಕ್ಯಾಪ್ ಕಂಡು ಬಂದಿದ್ದರಿಂದ ಸಾಮಾಜಿಕ ತಾಣಗಳಲ್ಲಿ ಫೊಟೋ, ಆಡಿಯೋ ಮತ್ತು ವೀಡಿಯೋ ಸಾಕಷ್ಟು ಹರಿದಾಡಿತ್ತು.
ಅಪಘಾತಕ್ಕೆ ಕಾರಣವಾದ ನ್ಯಾನೋ (KA 20 Z 6105) ಕಾರಿನ ಚಾಲಕ ದಕ್ಷಿಣ ಕನ್ನಡ ಜಿಲ್ಲಾ DCRIಘಟಕದ ಸಿಬ್ಬಂದಿ ಪ್ರಸನ್ನ ಎಂದು ತಿಳಿದುಬಂದಿದೆ. ಮೃತಪಟ್ಟ ಬೈಕ್(KA19 HN 3709)ಸವಾರ ಮೂಲತಃ ಮಾರ್ನಬೈಲು ನಿವಾಸಿಯಾಗಿದ್ದು ಪ್ರಸ್ತುತ ಕುಕ್ಕಾಜೆಯಲ್ಲಿ ವಾಸವಾಗಿರುವ ಎಸ್.ಎ.ಅಬೂಬಕ್ಕರ್ ಪುತ್ರ ತ್ವಾಹ @ಇಮ್ರಾನ್ ಎಂದು ತಿಳಿದುಬಂದಿದೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ ಕ್ರ: 88/2025 ಕಲಂ : 281, 106(1)BNS 2023 ರಂತೆ ಪ್ರಕರಣ ದಾಖಲಾಗಿದೆ. ಅಪಘಾತದ ಸಂದರ್ಭ ಆರೋಪಿ ಚಾಲಕ ಮದ್ಯಪಾನ ಮಾಡಿದ್ದಾರೆಂಬ ಆಡಿಯೋ, ವೀಡಿಯೋ ಸಾಕಷ್ಟು ವೈರಲಾಗಿದೆ. ಈ ಬಗ್ಗೆ ಖಚಿತವಾಗಿ ತಿಳಿದುಕೊಳ್ಳಲು ಪುಂಜಾಲಕಟ್ಟೆ ಠಾಣಾ ಪೊಲೀಸ್ ಉಪ ನಿರೀಕ್ಷಕರು ಮೃತ ವ್ಯಕ್ತಿಯ ಸಂಬಂಧಿಕರು ಮತ್ತು ವೀಡಿಯೋ, ಆಡಿಯೋ ಮಾಡಿರುವ ಮಹಿಳೆಯ ಸಮ್ಮುಖದಲ್ಲಿ ಆರೋಪಿ ಚಾಲಕನ ಆಲ್ಕೋಮೀಟರ್ ಪರೀಕ್ಷೆ ನಡೆಸಿದ್ದಾರೆ.
ಆ ಸಂದರ್ಭ ಆರೋಪಿ ಚಾಲಕ ಮದ್ಯಪಾನ ಮಾಡಿರುವುದು ದೃಢಪಟ್ಟಿಲ್ಲ ಎಂದು ಜಿಲ್ಲಾ ಎಸ್ಪಿಯವರು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಆರೋಪಿಯ ರಕ್ತ ಪರೀಕ್ಷೆಯನ್ನೂ ನಡೆಸಲಾಗುವುದು ಹಾಗೂ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿಯವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.




