December 21, 2025

ಕ್ರೀಡಾಕೂಟಗಳು ದೇಶದ ಸೌಹರ್ದತೆಗೆ ಪೂರಕವಾಗಬೇಕು: ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ

0
image_editor_output_image-476408353-1766330352647

ಕೋಡಪದವು: ಬಿಬಿಕೆ ಕೋಡಪದವು ತಂಡದ ಆಯೋಜನೆಯಲ್ಲಿ ಎರಡು ದಿನಗಳ ಕಾಲ ನಡೆದ ಅಂಡರ್ ಆರ್ಮ್ 8 ತಂಡಗಳ ಲೀಗ್ ಮಾದರಿಯ ಬೃಹತ್ ಕ್ರಿಕೆಟ್ ಕೂಟದ ಸಮಾರೋಪ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಭಾನುವಾರ ನಡೆಯಿತು. ಕ್ರೀಡಾಭಿಮಾನಿಗಳ ಅಪಾರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವು ಸೌಹಾರ್ದತೆ, ಏಕತೆ ಮತ್ತು ಸಾಮಾಜಿಕ ಒಗ್ಗಟ್ಟಿನ ಸಂದೇಶವನ್ನು ನೀಡಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು, ಹಿಂದಿನ ಕಾಲದಲ್ಲಿ ಜಾತಿ–ಮತ ಬೇಧವಿಲ್ಲದೆ ನಡೆಯುತ್ತಿದ್ದ ಕ್ರೀಡಾಕೂಟಗಳ ಸಂಸ್ಕೃತಿಯನ್ನು ಸ್ಮರಿಸಿದರು. ಕ್ರೀಡೆಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಯುತ ಮಾಧ್ಯಮವಾಗಿದ್ದು, ಇಂದಿನ ಕಾಲಘಟ್ಟದಲ್ಲಿ ದೇಶದ ಸೌಹಾರ್ದತೆಯನ್ನು ಕಾಪಾಡುವಲ್ಲಿ ಅವುಗಳ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು.

ಬಿಬಿಕೆ ತಂಡವು ಕೇವಲ ಕ್ರಿಕೆಟ್ ಕೂಟವನ್ನಷ್ಟೇ ಆಯೋಜಿಸದೆ, ಸಾಮಾಜಿಕ ಸೌಹಾರ್ದತೆಗೆ ಒತ್ತು ನೀಡಿ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವುದು ಶ್ಲಾಘನೀಯ ಕಾರ್ಯವೆಂದು ಅವರು ಪ್ರಶಂಸಿಸಿದರು. ಇಂತಹ ಕ್ರೀಡಾಕೂಟಗಳು ಯುವಜನರಲ್ಲಿ ಶಿಸ್ತು, ಸಹಕಾರ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಮಟ್ಟದಲ್ಲಿ ಇಂತಹ ಬೃಹತ್ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಬಿಬಿಕೆ ಕೋಡಪದವು ತಂಡವು ಮಾದರಿಯನ್ನೇ ನಿರ್ಮಿಸಿದೆ ಎಂದು ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಕ್ರೀಡೆಯ ಮೂಲಕ ಸಾಮಾಜಿಕ ಏಕತೆ ಮತ್ತು ರಾಷ್ಟ್ರಭಾವನೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು

ವಿವಿಧ ಕ್ಷೇತ್ರಗಳಲ್ಲಿ ಸಾದನೆ ಮಾಡಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಸೈನಾರ್ ತಾಳಿತ್ತನೂಜಿ, ಎ.ಕೆ.ಕುಕ್ಕಿಲ, ಡಿ’ ಗ್ರೂಪ್ ವಿಟ್ಲ ಹಾಗೂ ಪೋಲಿಸ್ ಇಲಾಖೆಯಲ್ಲಿ ನಿವೃತ್ತಿ ಹೊಂದಿದ ಮೋನಪ್ಪ ಗೌಡ ಕುಕ್ಕಿಲ, ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ಶಕುಂತಲಾ ಎಂ.ಬಿ., 4 ಬಾರಿ ರಾಷ್ಟ್ರೀಯ ತಂಡದಲ್ಲಿ ಆಡಿದ ಕಬಡ್ಡಿ ಕ್ರೀಡಾಪಟು ಕು|ಕೀರ್ತಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿಯೂ, ಮಾಜಿ ಜಿಲ್ಲಾ ಪಂಚಾಯತ್ ಉಪಾದ್ಯಕ್ಷರಾದ ಎಂ.ಎಸ್ ಮಹಮ್ಮದ್, ವಿಟ್ಲವಪಡ್ನೂರು ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಪ್ರೇಮಲತಾ, ಗ್ರಾಮ ಪಂಚಾಯತ್ ಸದಸ್ಯರಾದ ಹರ್ಷದ್ ಕುಕ್ಕಿಲ, ಬಿಬಿಕೆ ಇದರ ಅದ್ಯಕ್ಷರಾದ ರಿಯಾಜ್ ತಾಳಿತ್ತನೂಜಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!