February 4, 2026

ಮಡಂತ್ಯಾರಿನಲ್ಲಿ “ಕ್ರಿಸ್ಮಸ್ ಸೌಹಾರ್ದ ಸಭೆ” ಸಂಪನ್ನ:
ಸರ್ವಧರ್ಮ ಸಭೆ; ಮೆರವಣಿಗೆ;  ಸಾಂಸ್ಕೃತಿಕ ಕಾರ್ಯಕ್ರಮ

0
IMG-20211228-WA0009.jpg

ಬೆಳ್ತಂಗಡಿ; ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು, ಅಂತರ್ ಧರ್ಮೀಯ ಆಯೋಗ ಮಡಂತ್ಯಾರು, ಕೆಥೋಲಿಕ್ ಸಭಾ ಮಡಂತ್ಯಾರು ಹಾಗೂ ಐಸಿವೈಎಮ್ ಇವರ ಸಹಭಾಗಿತ್ವದಲ್ಲಿ ಕ್ರಿಸ್ಮಸ್ ಪ್ರಯುಕ್ತ ಸೌಹಾರ್ದ ಸಭೆಯು ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್ ಮುಂಭಾಗದಲ್ಲಿ ಜರುಗಿತು.

ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಚರ್ಚ್ ಪ್ರಧಾನ ಧರ್ಮಗುರುಗಳಾದ ರೆ.ಫಾ. ಬೇಸಿಲ್ ವಾಸ್ ಮಾತನಾಡಿ, ಪರಸ್ಪರರನ್ನು ಗೌರವಿಸುವುದೇ ಧರ್ಮ. ಪ್ರಭು ಏಸುಕ್ರಿಸ್ತರ ಜೀವನ ಸಂದೇಶದಂತೆ ದ್ವೇಷ ಅಸೂಯೆ ವಂಚನೆ ಇಲ್ಲದ ಜೀವನವೇ ನೈಜ ಜೀವನ ಎಂದರು.

ಹಿಂದೂ ಧರ್ಮದ ಪ್ರತಿನಿಧಿಯಾಗಿದ್ದು
ಉಪನ್ಯಾಸ ನೀಡಿದ, ನಿವೃತ್ತ ಮೇಜರ್ ಜನರಲ್ ಎಂ.ವಿ ಭಟ್, ಏಸುಕ್ರಿಸ್ತರು ಸರಳತೆ, ಪ್ರೀತಿ ಮತ್ತು ಸಹನೆಯ ಪಾಠ ಬೋದಿಸಿದ್ದಾರೆ. ಸಹಭಾಳ್ವೆಯ,‌ ಪರಸ್ಪರ ಅರ್ಥೈಸಿಕೊಂಡು ಬದುಕುವ ರೀತಿ ಧರ್ಮದ ತಿರುಳಾಗಿದೆ ಎಂದರು.
ಇಸ್ಲಾಂ ಧರ್ಮದ ಕುರಿತು ಮಾತನಾಡಿದ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ , ಎಲ್ಲಾ ಧರ್ಮಗಳಿಗಿಂತ ಮಾನವೀಯ ಧರ್ಮವೇ ಮೇಲು.‌ ಹೆತ್ತ ತಾಯಿಯನ್ನು, ಹಿರಿಯರನ್ನು, ಸಲಹುವ ಸಮಾಜವನ್ನು ನೋಯಿಸದೆ ಬಾಳುವುದನ್ನು ಕಲಿತವನೇ ಶ್ರೇಷ್ಠ. ‌ಪ್ರವಾದಿ ಪೈಗಂಬರ್ ಅವರು ಹೇಳಿದಂತೆ ನೆರೆಹೊರೆಯವರ ಸುಖ ಕಷ್ಟದಲ್ಲಿ ಸಮಾನವಾಗಿ ಭಾಗಿಯಾದರೆ ನಾಡಿಗೆ, ದೇಶಕ್ಕೇ ಸುಭೀಕ್ಷೆ ಇದೆ ಎಂದರು. ಕ್ರೈಸ್ತ ಧರ್ಮವನ್ನು ಪ್ರತಿನಿಧಿಸಿ ಮಾತನಾಡಿದ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎಮ್ ಜೋಸೆಫ್, ಕ್ರೈಸ್ತ‌ಧರ್ಮ ಎಂದರೆ ಪ್ರತಿಯೊಬ್ಬನೂ ಅಂತರಾತ್ಮದಲ್ಲೇ ಕ್ರೈಸ್ತನಾಗುವುದು. ಒಳ್ಳೆಯ ಕ್ರೈಸ್ತ, ‌ಒಳ್ಳೆಯ ಹಿಂದೂ, ಒಳ್ಳೆಯ ಮುಸ್ಲಿಂ ಎಂದೂ ಸಮಾಜ ಘಾತುಕನಾಗಲಾರ. ಆತನ ಜೀವನ ಕ್ರಮವೇ ಪರಸ್ಪರ ಗೌರವಿಸುವವ ಸಾಲಿಗೆ ಸೇರಿಹೋಗುತ್ತದೆ ಎಂದರು.

ಸಮಾರಂಭದಲ್ಲಿ ಸಹಾಯಕ ಧರ್ಮಗಳಾದ ಫಾ. ಸ್ಟೀವನ್ ಜೋಯೆಲ್ ಕುಟಿನ್ಹಾ, ಪ.ಪೂ ಕಾಲೇಜಿನ ಪ್ರಾಂಶುಪಾಲ
ಫಾ. ಜೆರೋಮ್ ಡಿಸೋಜ, ಅಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ
ಫಾ. ದೀಪಕ್ ಡೇಸಾ, ಆಶಾ ದೀಪದ ಧರ್ಮಗುರುಗಳಾದ
ಫಾ.‌ಜೋಸೆಫ್ ಮತ್ತು 
ಫಾ. ಜೈಸನ್, ಸ್ಥಳಾವಕಾಶ ನೀಡಿದ ನೂತನ್ ಕ್ಲೋತ್ ಸೆಂಟರ್ ಮಾಲಕರಾದ ವಲೇರಿಯನ್ ರೊಡ್ರಿಗಸ್ ಉಪಸ್ಥಿತರಿದ್ದರು.

ಅರ್ಸುಲೆನ್ ಫ್ರಾನ್ಸಿಸ್ಕನ್ ಕಾನ್ವೆಂಟ್‌ನ ಧರ್ಮಭಗಿನಿಯರ ಬಳಗದವರು ಪ್ರಾರ್ಥನೆ ಹಾಡಿದರು.
ಕ್ರಿಸ್ಮಸ್ ಕೇರಲ್ಸ್ ಅನ್ನು
ಸಂತ ಅಂತೋಣಿ ವಾರ್ಡ್, ಜಪಮಾಲೆ ಮಾತೆ ವಾರ್ಡ್,
ಗಾಯನ ಮಂಡಳಿ ಇವರು ನಡೆಸಿಕೊಟ್ಟರು.
ಐಸಿವೈಎಮ್ ಸದಸ್ಯರಿಂದ ನೃತ್ಯ‌ಪ್ರದರ್ಶನ ನಡೆಯಿತು.

ಆರಂಭದಲ್ಲಿ ಮಡಂತ್ಯಾರು ಸಹಕಾರಿ ಸಂಘದ ಬಳಿಯಿಂದ ಕ್ರಿಸ್ಮಸ್ ಸಂದೇಶ ಸಾರುವ
ಮೆರವಣಿಗೆ‌ ನಡೆಯಿತು.
ರೋಹಣ್ ಲೂಯಿಸ್ ನಿರೂಪಿಸಿದರು.
ಚರ್ಚ್ ಪಾಲನಾ ಮಂಡಳಿಯ ಸಂಯೋಜಕ ವಿವೇಕ್‌ ವಿನ್ಸೆಂಟ್ ಪಾಯಿಸ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪಾಲನಾ ಮಂಡಳಿ ಉಪಾಧ್ಯಕ್ಷ ಲಿಯೋ ರೊಡ್ರಿಗಸ್ ಧನ್ಯವಾದವಿತ್ತರು.

ಜೆರಾಲ್ಡ್ ಮೋರಸ್, ನೆಲ್ಸನ್‌ ಲಸ್ರಾದೋ, ಶೈನಿ‌ ಡಿಸೋಜಾ ಸಹಿತ ಸಹಯೋಗ ನೀಡಿದ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ
ಚರ್ಚ್ ವೇದಿಕೆಯಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ
ಬಹುಮಾನ ವಿತರಿಸಲಾಯಿತು. ನಮ್ಮ ಕಲಾವಿದರು ಬೆದ್ರ ತಂಡದಿಂದ ಪಾಂಡುನ ಅಲಕ್ಕ ಪೋಂಡು ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *

You may have missed

error: Content is protected !!