ಹೆಣ್ಣು ಮಗು ಎಂಬ ಕಾರಣಕ್ಕೆ 3 ದಿನದ ಕಂದಮ್ಮನನ್ನೇ ಕತ್ತು ಹಿಸುಕಿ ಕೊಂದ ತಾಯಿ
ಬೆಳಗಾವಿ: ಹೆಣ್ಣು ಮಗು ಎಂಬ ಕಾರಣಕ್ಕೆ ಮೂರು ದಿನದ ಕಂದಮ್ಮನನ್ನೇ ಕತ್ತು ಹಿಸುಕಿ ತಾಯಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ನಡೆದಿದೆ.
ತಾಯಿ ಅಶ್ವಿನಿ ಹಳಕಟ್ಟಿ(28) ಕೊಂದ ಪಾಪಿ. ಈಗಾಗಲೇ ಆರೋಪಿ ಅಶ್ವಿನಿಗೆ ಮೂರು ಹೆಣ್ಣು ಮಕ್ಕಳಿದ್ದು, ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು.
ನ.23ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿತ್ತು. ಮಾರನೇ ದಿನ ಅಶ್ವಿನಿ ತಾಯಿ ಮನೆ ಹಿರೇಮುಲಂಗಿಗೆ ಬಂದಿದ್ದಳು. ಇಂದು (ನ.25) ಬೆಳಿಗ್ಗೆ ತಾಯಿ ಹೊರಹೋದಾಗ ಮಗಳ ಕತ್ತು ಹಿಸುಕಿ, ಮಗು ಉಸಿರಾಡುತ್ತಿಲ್ಲ ಎಂದು ಡ್ರಾಮಾ ಮಾಡಿದ್ದಾಳೆ.
ಕೂಡಲೇ ಮಗುವನ್ನು ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ವೈದ್ಯರು ಕತ್ತು ಹಿಸುಕಿ ಉಸಿರು ಗಟ್ಟಿಸಿದ್ದಕ್ಕೆ ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.




