ಕಾರು ಅಪಘಾತ: ಬೆಂಗಳೂರು ಮೂಲದ ಟೆಕ್ಕಿ ಮೃತ್ಯು
ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಮೃತಪಟ್ಟಿದ್ದಾರೆ.
ಸಮನ್ವಿತಾ ಧಾರೇಶ್ವರ್ (33) ಮೃತ ಮಹಿಳೆ. ನ.8 ರಂದು ಈ ಘಟನೆ ನಡೆದಿದ್ದು ಪತಿ ಮತ್ತು 3 ವರ್ಷದ ಮಗನೊಂದಿಗೆ ಜರ್ಜ್ ಸೇಂಟ್ ಇನ ಹಾರ್ನ್‌ಸ್ಬಿ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರೊಂದು ಗುದ್ದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಅವರು ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆಗೆ ಈ ಕುಟುಂಬ ರಸ್ತೆ ದಾಟುತ್ತಿತ್ತು. ದಾರಿಯಲ್ಲಿ ಬರುತ್ತಿದ್ದ ಕಿಯಾ ಕಾರ್ನಿವಲ್ ಚಾಲಕ ಕಾರನ್ನು ನಿಲ್ಲಿಸಿ ಕುಟುಂಬಕ್ಕೆ ದಾರಿ ಮಾಡಿಕೊಟ್ಟಿದ್ದ. ಆದರೆ ಈ ಕಾರಿಗೆ ಹಿಂದಿನಿಂದ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ, ಕಿಯಾ ಕಾರು ಸಮನ್ವಿತಾ ಅವರಿಗೆ ಡಿಕ್ಕಿ ಹೊಡೆದಿದೆ.
ಸಮನ್ವಿತಾ ಅವರನ್ನು ಕೂಡಲೇ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರಿಂದ ಅವರು ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.





