ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣ: 19 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು: 2006 ಡಿಸೆಂಬರ್ 1 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿಯನ್ನು ಗುರುಪುರ ಕಬೀರ್ ಹಾಗೂ ಆತನ ಸಹಚರರು ಸೇರಿಕೊಂಡು ಹತ್ಯೆ ಮಾಡಿದ್ದರು.
ಸುಖಾನಂದ ಶೆಟ್ಟಿ ಹತ್ಯೆ ಆ ದಿನಗಳಲ್ಲಿ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಕಬೀರ್ ಎಂಬಾತನಿಗೆ ಲತೀಫ್ ಯಾನೆ ಅಡ್ಡೂರು ಲತೀಫ್ ಹಾಗೂ ಪ್ರಸ್ತುತ ಕಿನ್ನಿಪದವು ನಿವಾಸಿ ಅಬ್ದುಲ್ ಸಲಾಂ ಅಡ್ಡೂರು ಎಂಬ ಸಹೋದರರು ತಮ್ಮ ಅಡ್ಡೂರು ಟಿಬೇಟ್ ಕಾಲೋನಿಯಲ್ಲಿರುವ ಮನೆಯಲ್ಲಿ ಎರಡು ದಿನಗಳ ಕಾಲ ಆಶ್ರಯ ನೀಡಿದ್ದರು. ಮಾತ್ರವಲ್ಲ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿ ಕಬೀರ್ ನನ್ನು ವಾಹನದಲ್ಲಿ ಕೇರಳದ ಕಾಸರಗೋಡು ಬಳಿ ಬಿಟ್ಟು ನಂತರ ಅಬ್ದುಲ್ ಸಲಾಂ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ.
ಸದ್ರಿ ಆರೋಪಿ ಸಲಾಂ ವಿರುದ್ಧ ಪೊಲೀಸರು ದಸ್ತಗಿರಿಯಾಗದೇ ತಲೆಮರೆಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಆದರೆ ಇತ್ತೀಚೆಗೆ ವಿದೇಶದಿಂದ ಮರಳಿದ್ದ ಅಬ್ದುಲ್ ಸಲಾಂ ನನ್ನು ಖಚಿತ ಮಾಹಿತಿ ಮೇರೆಗೆ ನವೆಂಬರ್ 18 ರಂದು ಬಜಪೆ ಕಿನ್ನಿಪದವು ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
2007 ರಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ವಿದೇಶಗಳಲ್ಲಿ ಹಲವು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಅಬ್ದುಲ್ ಸಲಾಂ ಅಡ್ಡೂರಿನ ಮನೆಯನ್ನು ನೆಲಸಮ ಮಾಡಿಸಿ ಬಜಪೆಯ ಕಿನ್ನಿಪದವಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈತನ ಸಹೋದರ ಅಡ್ಡೂರು ಲತೀಫ್ ಇನ್ನೂ ವಿದೇಶದಲ್ಲಿ ತಲೆಮರೆಸಿಕೊಂಡಿರುತ್ತಾನೆ.
ಈ ಪ್ರಕರಣದಲ್ಲಿ 16 ಆರೋಪಿಗಳನ್ನು ಈ ಹಿಂದೆ ಬಂದಿಸಿದ್ದು ಉಳಿದ 11 ಜನ ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ. ಅಬ್ದುಲ್ ಸಲಾಂ ಮೇಲೆ ಬಜಪೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣದಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ನ್ಯಾಯಾಲಯದಿಂದ ಹಲವಾರು ಬಾರಿ ವಾರಂಟ್ ಗಳನ್ನು ಹೊರಡಿಸಿದ್ದು ಸದ್ರಿ ಆರೋಪಿಯು ಸುಮಾರು 19 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದುದರಿಂದ ಈತನ ವಿರುದ್ಧ ಠಾಣೆಯಲ್ಲಿ ಕಲಂ 209 ಬಿಎನ್.ಎಸ್ ರಂತೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪ ವಿಭಾಗ) ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ ಸುರತ್ಕಲ್ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ರವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.





