ಉಸಿರುಗಟ್ಟಿ ಮೂವರು ಯುವಕರು ಸಾವು
ಬೆಳಗಾವಿ: ರಾತ್ರಿ ಮಲಗುವ ವೇಳೆ ಚಿಳಿಯಿಂದ ಬೆಚ್ಚಗೆ ಇರಲು ರೂಮಿನಲ್ಲಿ ಹಾಕಿದ್ದ ಬೆಂಕಿಯ ಹೊಗೆಯಿಂದ ಮೂವರು ಯುವಕರು ಉಸಿರುಗಟ್ಟಿ ಸಾವನಪ್ಪಿದ ಘಟನೆ ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದ್ದು. ಮಂಗಳವಾರ ಸಂಜೆ ಪಾಲಕರು ಇವರನ್ನು ಹುಡುಕುತ್ತ ಬಂದಾಗಲೇ ಘಟನೆ ಗೊತ್ತಾಗಿದೆ.
ಮೃತರನ್ನು ಅಮನ್ ನಗರದ ನಿವಾಸಿಗಳಾದ ರಿಹಾನ್ ಮತ್ತೆ (22), ಮೋಹಿನ್ ನಾಲಬಂದ (23) ಹಾಗೂ ಸರ್ಫರಾಜ್ ಹರಪ್ಪನಹಳ್ಳಿ (22) ಮೃತಪಟ್ಟವರು. ಇವರೊಂದಿಗೇ ಮಲಗಿದ್ದ ಶಾಹನವಾಜ್ (19) ಎಂಬ ಪ್ರಜ್ಞಾಹೀನವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ವರೂ ಸೇರಿ ಸೋಮವಾರ ಮಧ್ಯಾಹ್ನ ಯಾವುದೋ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದರು. ರಾತ್ರಿ ಚಳಿ ಹೆಚ್ಚಾಗಿದ್ದರಿಂದ ಮಲಗುವ ಕೋಣೆಯಲ್ಲಿ ಇದ್ದಿಲಿನ ಒಲೆ (ಶೀಗಡಿ)ಯಲ್ಲಿ ಬೆಂಕಿ ಹಾಕಿ ರೂಮಿನಲ್ಲಿ ಇಟ್ಟುಕೊಂಡಿದ್ದರು. ಅದೇ ಒಲೆಯಲ್ಲಿ ನಾಲ್ಕು ಸೊಳ್ಳೆ ನಿರೋಧಕ ಕಾಯಿಲ್‌ಗಳನ್ನು ಹಾಕಿದ್ದು ಗೊತ್ತಾಗಿದೆ.
ಯುವಕರು ಮಲಗಿದ ರೂಮಿಗೆ ಕಿಟಕಿಗಳಿಲ್ಲ. ಬಾಗಿಲನ್ನು ಭದ್ರವಾಗಿ ಹಾಕಿಕೊಂಡಿದ್ದರು. ನಿದ್ರೆಗೆ ಜಾರಿದ ಮೇಲೆ ಕೋಣೆಯ ಒಳಗೆ ಇದ್ದಿಲಿನ ಹೊಗೆ ದಟ್ಟವಾಗಿ ಆವರಿಸಿ, ಉಸಿರಾಟಕ್ಕೆ ಸಮಸ್ಯೆ ಆಗಿದೆ. ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.





