ಪಡೀಲ್- ಕಣ್ಣೂರು ಬಳಿ ಕಾಮಗಾರಿ ವೇಳೆ ಪೈಪ್ ಲೈನ್ ಗೆ ಹಾನಿ: ಮಂಗಳೂರು ನಗರಕ್ಕೆ 2 ದಿನ ನೀರಿನ ಸರಬರಾಜಿನಲ್ಲಿ ವ್ಯತ್ಯಯ
ಮಂಗಳೂರು: ನಗರದ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಪಡೀಲ್- ಕಣ್ಣೂರು ಬಳಿ ಕಾಮಗಾರಿ ವೇಳೆ ಹಾನಿಗೊಳಗಾದ ಪರಿಣಾಮ ಸೋಮವಾರ ಮತ್ತು ಮಂಗಳವಾರ ನೀರು ಪೂರೈಕೆ ಸ್ಥಗಿತವಾಗಿತ್ತು. ಇದರಿಂದ ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಜನರು ಪರದಾಡುವಂತಾಗಿದೆ.
ತುಂಬೆ ಡ್ಯಾಂನಿಂದ ಪಡೀಲ್ ಟ್ಯಾಂಕ್ ಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ 18 ಅಡಿ ಕೆಳಭಾಗದಲ್ಲಿದೆ. ಬೆಂದೂರು ಪಂಪ್ಹೌಸ್ಗೆ ಸರಬರಾಜಾಗುವ ಮುಖ್ಯ ಕೊಳವೆಯ ಕೆಳಭಾಗದಲ್ಲಿ ಪಡೀಲ್ ಪಂಪ್ಹೌಸ್ನಿಂದ ನಗರದ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು, ಪಳ್ನೀರ್, ಮುಳಿಹಿತ್ಲು, ಬೋಳಾರ, ಕಾರ್ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್ಬ್ಯಾಂಕ್, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಅಳಪೆ, ಅತ್ತಾವರ, ಉಲ್ಲಾಸ್ ನಗರ, ಚಿಲಿಂಬಿ, ಕೋಡಿಕಲ್, ಉರ್ವಸ್ಟೋರ್, ಆಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್, ಕಾವೂರು, ಮರಕಡ ಮುಂತಾದ ಪ್ರದೇಶಗಳಿಗೆ ನೀರು ಸರಬರಾಜು ಮಂಗಳವಾರವೂ ಸ್ಥಗಿತವಾಗಿತ್ತು.
ಪೈಪ್ ಲೈನ್ ನ ಮೇಲಿದ್ದ ಮಣ್ಣನ್ನು ಮಂಗಳವಾರ ದಿನವಿಡೀ ಜೆಸಿಬಿ, ಟಿಪ್ಪರ್ ಬಳಸಿ ತೆರವುಗೊಳಿಸಲಾಗಿದೆ. ಇದೀಗ ಮಣ್ಣಿನಡಿ ಹಾನಿಗೊಳಗಾದ ಪೈಪ್ ನ ಸ್ಥಳ ಗೊತ್ತಾಗಿದೆ. ಆದರೆ ಹೊಂಡ ತೋಡಿದ ಸ್ಥಳದಲ್ಲಿ ಸಂಗ್ರಹವಾಗಿರುವ ನೀರು ಸಂಪೂರ್ಣ ಖಾಲಿ ಮಾಡುವ ಕೆಲಸ ಮುಂದುವರಿದಿದೆ. ಆ ಪೈಪ್ ತುಂಡು ಮಾಡಿ, ವೆಲ್ಡ್ ಮಾಡಬೇಕು. ಈ ಎಲ್ಲಾ ಕೆಲಸ ನಡೆಯಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು
ಎಂದು ಮಂಗಳೂರು ಮನಪಾ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





