ಶ್ರೀನಗರ ನೌಗಾಮ್ ಪೊಲೀಸ್ ಠಾಣೆಯಲ್ಲಿ ಭಾರೀ ಸ್ಫೋಟ: 6 ಪೊಲೀಸರು ಮೃತ್ಯು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ತಡರಾತ್ರಿ ಭಾರಿ ಸ್ಫೋಟ ಸಂಭವಿಸಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತುಗಳ ಮಾದರಿ ಸಂಗ್ರಹಿಸಿಟ್ಟಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿ 6 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆಯಿಂದ ಭಾರಿ ಪ್ರಮಾಣದ ಹೊಗೆ ಮತ್ತು ಜ್ವಾಲೆಗಳು ಹೊರಬರುತ್ತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಲ್ಲಿ ಕಾಣಿಸಿವೆ. ಗಾಯಗೊಂಡ ಪೊಲೀಸರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ನವದೆಹಲಿಯ ಕೆಂಪು ಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಸಂಭವಿಸಿದ ಕೆಲವೇ ದಿನಗಳಲ್ಲಿ ಇದೀಗ ಶ್ರೀನಗರದಲ್ಲೂ ಸ್ಫೋಟ ಸಂಭವಿಸಿದೆ. ದೆಹಲಿ ಸ್ಫೋಟದಲ್ಲಿ ಒಟ್ಟು 13 ಜನ ಸಾವಿಗೀಡಾಗಿದ್ದರು.




