ದೇರಳಕಟ್ಟೆಯ ಪುಟ್ಟ ಕ್ಯಾಂಟೀನ್‌ನಲ್ಲಿ ಸಂಗೀತದ ರಸದೌತಣ
ಮಂಗಳೂರು: ಸಾಮಾನ್ಯವಾಗಿ ಸಂಜೆ ಹೊತ್ತು ಒಂದು ಕಪ್ ಬಿಸಿ ಬಿಸಿ ಚಹಾ ಕುಡಿಯುತ್ತಾ ಹರಟೆ ಹೊಡೆಯುವುದು ಎಲ್ಲರಿಗೂ ಇಷ್ಟ. ಆದರೆ, ಚಹಾ ಸವಿಯುತ್ತಲೇ ಲೈವ್ ಆಗಿ ಸುಮಧುರ ಹಾಡುಗಳನ್ನು ಕೇಳುವ ಅವಕಾಶ ಸಿಕ್ಕರೆ ಹೇಗಿರುತ್ತದೆ? ಮಂಗಳೂರಿನ ದೇರಳಕಟ್ಟೆಯಲ್ಲಿ ಇಂತಹದ್ದೊಂದು ವಿಶಿಷ್ಟ ಅನುಭವ ಗ್ರಾಹಕರಿಗೆ ಸಿಗುತ್ತಿದೆ. ಅಲ್ಲಿ ಚಹಾ ಮಾರುವ ವ್ಯಕ್ತಿಯೊಬ್ಬರು ತಮ್ಮ ಕಂಠಸಿರಿಯ ಮೂಲಕವೇ ಈಗ ಎಲ್ಲರ ಫೇವರಿಟ್ ಆಗಿದ್ದಾರೆ.
ಮಂಗಳೂರಿನ ದೇರಳಕಟ್ಟೆಯ ಫಾದರ್ ಮುಲ್ಲರ್ ಆಸ್ಪತ್ರೆಯ ಎದುರಿನಲ್ಲಿರುವ ಈ ಪುಟ್ಟ ಕ್ಯಾಂಟೀನ್ ಈಗ ಕೇವಲ ಚಹಾ ಅಂಗಡಿಯಾಗಿ ಉಳಿದಿಲ್ಲ; ಬದಲಾಗಿ ಸಂಗೀತ ಪ್ರಿಯರ ನೆಚ್ಚಿನ ತಾಣವಾಗಿದೆ. ಇಲ್ಲಿನ ಮಾಲೀಕ ಅಬ್ದುಲ್ ಸಲೀಂ ಅವರಿಗೆ ಚಹಾ ತಯಾರಿಸುವುದು ವೃತ್ತಿಯಾದರೆ, ಹಾಡುವುದು ಉಸಿರು. ಚಹಾ ನೀಡುತ್ತಲೇ ಮೈಕ್ ಹಿಡಿದು ಹಾಡುವ ಸಲೀಂ, ತಮ್ಮ ಸುಮಧುರ ಕಂಠದ ಮೂಲಕ ಸ್ಥಳೀಯರ ಹಾಗೂ ದೂರದ ಊರುಗಳಿಂದ ಬರುವ ಗ್ರಾಹಕರ ಮನಗೆದ್ದಿದ್ದಾರೆ.
ಆರನೇ ತರಗತಿಯವರೆಗೆ ಓದಿರುವ ಸಲೀಂ, ಯಾವುದೇ ಸಂಗೀತ ಶಾಲೆಗೆ ಹೋಗಿ ತರಬೇತಿ ಪಡೆದವರಲ್ಲ. ಬಾಲ್ಯದಲ್ಲಿ ಕ್ಯಾಸೆಟ್‌ಗಳಲ್ಲಿ ಹಾಡುಗಳನ್ನು ಕೇಳುತ್ತಲೇ ಸಂಗೀತದ ಪಟ್ಟುಗಳನ್ನು ಕರಗತ ಮಾಡಿಕೊಂಡರು. ಇವರ ವಿಶೇಷತೆಯೆಂದರೆ ಒಂದಲ್ಲ, ಎರಡಲ್ಲ—ಕನ್ನಡ, ತುಳು, ಬ್ಯಾರಿ, ಮಲಯಾಳಂ, ತಮಿಳು ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳ ಹಾಡುಗಳನ್ನು ನಿರರ್ಗಳವಾಗಿ ಹಾಡುತ್ತಾರೆ.
ಇಲ್ಲಿಗೆ ಚಹಾ ಕುಡಿಯಲು ಬರುವ ಗ್ರಾಹಕರು ಕೇವಲ ಕೇಳುಗರಾಗಿ ಉಳಿಯುವುದಿಲ್ಲ; ಸಲೀಂ ಅವರ ಹಾಡಿಗೆ ಧ್ವನಿಗೂಡಿಸುತ್ತಾರೆ. ಕೆಲವರು ಮೈಕ್ ಪಡೆದು ತಮ್ಮ ನೆಚ್ಚಿನ ಹಾಡುಗಳನ್ನು ಹಾಡುತ್ತಾರೆ. ಸ್ನೇಹಿತರ ತಂಡಗಳು ಸೇರಿದಾಗ ಈ ಪುಟ್ಟ ಕ್ಯಾಂಟೀನ್ ಒಂದು ಮಿನಿ ಸಂಗೀತ ವೇದಿಕೆಯಾಗಿ ಬದಲಾಗುತ್ತದೆ.




