ವೀರೇಂದ್ರ ಹೆಗ್ಗಡೆ ಹುಟ್ಟುಹಬ್ಬದ ಪ್ರಯುಕ್ತ ವಿಟ್ಲದಲ್ಲಿ ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮ
ವಿಟ್ಲ: ವೀರೇಂದ್ರ ಹೆಗ್ಗಡೆ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ವಿಟ್ಲ ತಾಲೂಕು ವತಿಯಿಂದ ವಿವಿಧ ಧಾರ್ಮಿಕ ಹಾಗೂ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಊರಿನ ಗಣ್ಯರು, ಯೋಜನಾಧಿಕಾರಿ ಸುರೇಶ್ ಗೌಡ, ಜನಜಾಗೃತಿ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಎಳನೀರು ಅಭಿಷೇಕ ನೆರವೇರಿಸಲಾಯಿತು.
ವಿಟ್ಲ ವಲಯದ ಶೌರ್ಯ ವಿಪತ್ತು ಘಟಕದ ವತಿಯಿಂದ ವಲಯದ ೧೦ ಅಶಕ್ತ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ವಿಟ್ಲದ ಎಂಡೋಸಲ್ಫಾನ್ ಪೀಡಿತ ಮಕ್ಕಳ ಪಾಲನಾ ಕೇಂದ್ರದ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು.
ಮೊಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಹಾಗೂ ಪಂಚಕಜ್ಜಾಯ ಸೇವೆ ನೆರವೇರಿಸಲಾಯಿತು. ಮುಡಿಪು ಮಂಜುನಾಥ ಭಟ್ ಅವರಿಗೆ ದಿನಸಿ ಸಾಮಗ್ರಿ ಹಾಗೂ ಹಣ್ಣುಹಂಪಲು ವಿತರಿಸಲಾಯಿತು.
ಸಾಲೆತ್ತೂರು ಶಿವಗಿರಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಹಾಗೂ ಸರ್ವಸೇವೆ, ಕಲ್ಲಡ್ಕ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಿತ್ಯ ಪೂಜೆ ಮತ್ತು ನೆಟ್ಲಾ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಕೇಪು ಬನಾರಿ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಕೇಪು ಉಳ್ಳಾಲ್ತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಮಾಣಿ ಕರಿಂಕ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸರ್ವಸೇವೆ ಮತ್ತು ಮಾಮೇಶ್ವರ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು.




