ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮನೆ, ಫಾರಂ ಹೌಸ್ ಸೇರಿ ನಾಲ್ಕು ಕಡೆ ಲೋಕ ದಾಳಿ
ಚಿಕ್ಕಮಗಳೂರು: ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧ ವಾರದ ಹಿಂದೆ ಎಫ್‌ಐಆರ್ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು, ಮಂಗಳವಾರ ಅವರ ಮನೆ, ಫಾರಂ ಹೌಸ್ ಸೇರಿ ನಾಲ್ಕು ಕಡೆ ಶೋಧ ಆರಂಭಿಸಿದ್ದಾರೆ.
ಕೊಪ್ಪ ನಿವಾಸಿ ದಿನೇಶ್ ಎಚ್.ಕೆ. ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ರಾಜೇಗೌಡ, ಪತ್ನಿ ಡಿ.ಕೆ. ಪುಷ್ಪಾ, ಪುತ್ರ ರಾಜ್‌ದೇವ್ ಟಿ.ಆರ್. ವಿರುದ್ಧ ಸೆ.23ರಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಮಂಗಳವಾರ ಬೆಳಿಗ್ಗೆಯೇ ಖಾಂಡ್ಯ ಹೋಬಳಿ ಬಸಾಪುರ ಗ್ರಾಮದಲ್ಲಿರುವ ರಾಜೇಗೌಡ ಅವರ ನಿವಾಸಕ್ಕೆ ತೆರಳಿರುವ ಅಧಿಕಾರಿಗಳು, ದಾಖಲೆಗಳ ಸಂಗ್ರಹಕ್ಕೆ ಶೋಧ ನಡೆಸುತ್ತಿದ್ದಾರೆ.
‘ಬೆಂಗಳೂರಿನಲ್ಲಿ ಸಂಬಂಧಿಕರ ಮನೆ ಮತ್ತು ಅವರ ಫಾರಂ ಹೌಸ್ ಸೇರಿ ನಾಲ್ಕು ಕಡೆ ಶೋಧ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




