ವೃದ್ಧಾಶ್ರಮದಲ್ಲಿ ತಂದೆ ಮೃತ್ಯು : ವೀಡಿಯೊ ಕಾಲ್ ಮೂಲಕ ಅಂತ್ಯಕ್ರಿಯೆ ವೀಕ್ಷಿಸಿದ ಪುತ್ರಿಯರು
ಹರ್ಯಾಣ: ತನ್ನ ಮೂವರು ಪುತ್ರಿಯರನ್ನು ಓದಿಸಲು ಜೀವನವನ್ನೇ ಸವೆಸಿದ ವೃದ್ಧರೊಬ್ಬರು ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮದಲ್ಲಿ ನಿಧನರಾದರು. ಆದರೆ, ಅಂತಿಮ ವಿಧಿ ವಿಧಾನಗಳಲ್ಲಿ ಅವರ ಪುತ್ರಿಯರು ಪ್ರತ್ಯಕ್ಷವಾಗಿ ಪಾಲ್ಗೊಳ್ಳಲಿಲ್ಲ. ಬದಲಿಗೆ ಅವರು ನೇಪಾಳ, ಉತ್ತರಪ್ರದೇಶ ಮತ್ತು ಮುಂಬೈನಿಂದ ವೀಡಿಯೊ ಕಾಲ್ ಮೂಲಕ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಮೂಲತಃ ಮುಂಬೈಯವರಾದ ಮತ್ತು ಮಾಜಿ ಜವಳಿ ವ್ಯಾಪಾರಿಯಾಗಿದ್ದ ಶಿವಚರಣ್ ರಾಮ್ ರತನ್ ಗುಪ್ತಾ ಅವರು ಸುಮಾರು ಎರಡು ವರ್ಷಗಳಿಂದ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ಪತ್ನಿ ಮೀನಾ ಅವರೊಂದಿಗೆ ಅಲ್ಲಿಗೆ ಬಂದಿದ್ದರು. ಆದರೆ, ಮೀನಾ ಅವರು ಈ ಹಿಂದೆ ನಿಧನರಾಗಿದ್ದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗುಪ್ತಾ ಅವರು ಮಂಗಳವಾರ ಬೆಳಗ್ಗೆ 3.30ಕ್ಕೆ ನಿಧನರಾದರು. ಅವರ ನಿಧನದ ನಂತರ ವೃದ್ಧಾಶ್ರಮದ ಆಡಳಿತ ಮಂಡಳಿ ಅವರ ಮೂವರು ಪುತ್ರಿಯರನ್ನು ಸಂಪರ್ಕಿಸಿತು.
ಪುತ್ರಿಯರಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸೋನಿಪತ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಬದಲಿಗೆ ಅವರು ವೀಡಿಯೊ ಕಾಲ್ ಮೂಲಕ ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು. ವೃದ್ಧಾಶ್ರಮದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಸಮುದಾಯದ ಸದಸ್ಯರ ನೆರವಿನಿಂದ ಅಂತ್ಯಕ್ರಿಯೆ ನೆರವೇರಿತು.
ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ಅವರ ಪ್ರಕಾರ, ”ಶಿವಚರಣ್ ಅವರ ಬಳಿ ಫೋನ್ ಇತ್ತು. ಅದರ ಮೂಲಕ ಅವರು ತಮ್ಮ ಪುತ್ರಿಯರೊಂದಿಗೆ ಆಗಾಗ ಮಾತನಾಡುತ್ತಿದ್ದರು. ಅವರು ಅಸ್ವಸ್ಥರಾದ ನಂತರ ಅವರ ಕರೆಗಳು ನಿಂತು ಹೋದವು. ಅವರ ಆರೋಗ್ಯ ಹದಗೆಟ್ಟಿರುವ ಕುರಿತು ಸುಮಾರು 20 ದಿನಗಳ ಹಿಂದೆ ಪುತ್ರಿಯರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಅವರು ಆಗಮಿಸಲಿಲ್ಲ”
ಶಿವಚರಣ್ ಅವರು ನಿಧನರಾದ ಬಳಿಕ ಆಡಳಿತ ಮಂಡಲಿ ಮತ್ತೊಮ್ಮೆ ಪುತ್ರಿಯರನ್ನು ಸಂಪರ್ಕಿಸಿತು, ”ನೀವು ಸೋನಿಪತ್‌ಗೆ ಬಂದರೆ ವ್ಯವಸ್ಥೆ ಮಾಡಬಹುದು ಎಂದು ತಿಳಿಸಿತು”. ಆದರೂ ಅವರು, ”ತಮಗೆ ಪ್ರಯಾಣಿಸಲು ಸಮಯವಿಲ್ಲ” ಎಂದು ಹೇಳಿದರು.
ನಂತರ ಪುತ್ರಿಯರು ವೀಡಿಯೊ ಕಾಲ್ ಮೂಲಕ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ದೂರದಿಂದಲೇ ವೀಕ್ಷಿಸಿದರು.
ನೇಪಾಳದಲ್ಲಿ ವಾಸಿಸುತ್ತಿರುವ ಮತ್ತು ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಅನಿತಾ ಅವರು ಆನ್‌ಲೈನ್ ಮೂಲಕ 5,100 ರೂ.ಗಳನ್ನು ಕಳುಹಿಸಿ ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ಸರಿಯಾಗಿ ನೆರವೇರಿಸುವಂತೆ ಮನವಿ ಮಾಡಿದ್ದರು.
ಅಂತ್ಯಕ್ರಿಯೆ ನಂತರ, ಅಂತ್ಯಕ್ರಿಯೆಯ ವೀಡಿಯೊಗಳನ್ನು ತಮಗೆ ಕಳುಹಿಸುವಂತೆ ಪುತ್ರಿಯರು ವೃದ್ಧಾಶ್ರಮದ ಆಡಳಿತ ಮಂಡಳಿಯಲ್ಲಿ ವಿನಂತಿಸಿದ್ದರು. ಕರೆ ಮೂಲಕ ಮಾತನಾಡುತ್ತಾ ಒಬ್ಬರು, ”ಇನ್ನೆಷ್ಟು ಹೊತ್ತು ಹಿಡಿಯುತ್ತದೆ. ನಾವು ಊಟ ಮಾಡಬೇಕು, ಸ್ನಾನ ಮಾಡಬೇಕು” ಎಂದು ಹೇಳುವುದು ಕೇಳಿಸಿದೆ ಎಂದು ಆನಂದ್ ಕುಮಾರ್ ತಿಳಿಸಿದ್ದಾರೆ.




