ಡಿವೈಡರ್ ಗೆ ಕಾರು ಢಿಕ್ಕಿಯಾಗಿ ಬೆಂಕಿ: ಖ್ಯಾತ ನ್ಯೂರೋ ಸರ್ಜನ್ ಸಜೀವ ದಹನ
ತೆಲಂಗಾಣ: ಖಮ್ಮಂನ ಪ್ರಸಿದ್ಧ ಆಸ್ಪತ್ರೆಯ ನ್ಯೂರೋ ಸರ್ಜನ್ ಕರ್ನಾಟಕ ಮೂಲದ ವೈದ್ಯರೊಬ್ಬರು ಪ್ರಯಾಣಿಸುತ್ತಿದ್ದ ಐಷಾರಾಮಿ ವೋಲ್ವೋ ಕಾರು ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿ ಆಕಸ್ಮಿಕ ಬೆಂಕಿಗಾಹುತಿಯಾದ ಘೋರ ದುರಂತ ತೆಲಂಗಾಣದ ಸೂರ್ಯಪೇಟ್-ಖಮ್ಮಂ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಖಮ್ಮಂನ ಮಮತಾ ಆಸ್ಪತ್ರೆಯ ಹಿರಿಯ ನರಶಸ್ತ್ರಚಿಕಿತ್ಸಕ ಡಾ. ಕಸಕುರ್ತಿ ಜಗದೀಶ್ (50) ಅವರು ಕಾರಿನೊಳಗೇ ಸಜೀವ ದಹನಗೊಂಡು ಮೃತಪಟ್ಟಿದ್ದು, ಘಟನೆಯ ನಡುಕ ಹುಟ್ಟಿಸುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ.
ಸೂರ್ಯಪೇಟ್-ಖಮ್ಮಂ ಹೆದ್ದಾರಿಯ ಪಿಲ್ಲಲಮರ್ರಿ ಬಳಿ ಬೆಳಿಗ್ಗೆ 7:15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ, ಅತ್ಯಂತ ವೇಗವಾಗಿ ಬರುತ್ತಿದ್ದ ವೋಲ್ವೋ ಕಾರು ದಿಢೀರನೆ ಫಾಸ್ಟ್ ಲೇನ್‌ನಿಂದ ಎಡಕ್ಕೆ ತಿರುಗಿ, ಹೆದ್ದಾರಿಯ ಎಲ್ಲಾ ಲೇನ್‌ಗಳನ್ನು ದಾಟಿ ರಸ್ತೆ ಬದಿಯ ಹೊರ ವಿಭಜಕಕ್ಕೆ ರಭಸವಾಗಿ ಡಿಕ್ಕಿಯಾಗಿದೆ. ಡಿಕ್ಕಿಯಾದ ಕೆಲವೇ ಸೆಕೆಂಡುಗಳಲ್ಲಿ ಕಾರಿನಲ್ಲಿ ಭಾರಿ ಸ್ಫೋಟ ಸಂಭವಿಸಿ ಬೆಂಕಿ ಆವರಿಸಿದೆ. ಸ್ಥಳೀಯರು ಹಾಗೂ ರಕ್ಷಕರು ಸಹಾಯಕ್ಕೆ ಧಾವಿಸುವಷ್ಟರಲ್ಲೇ ಬೆಂಕಿಯ ಕೆನ್ನಾಲಿಗೆ ಇಡೀ ವಾಹನವನ್ನು ಸಂಪೂರ್ಣವಾಗಿ ಸುಟ್ಟು ಭಸ್ಮಗೊಳಿಸಿದೆ.




