ಬಿ.ಸಿ ರೋಡ್: ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನ ಅಪಘಾತ ಪ್ರಕರಣ: ಗಾಯಾಳು ಇಬ್ಬರು ಮೃತ್ಯು-
ಬಂಟ್ವಾಳ: ಬಿ.ಸಿ.ರೋಡ್ ಎನ್.ಜಿ. ಸರ್ಕಲ್‌ನಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಗುರುವಾರ ಸಂಜೆ ಸುಮಾರು 6.30 ಗಂಟೆಗೆ ಕಲ್ಲಡ್ಕ ಕಡೆಯಿಂದ ಲೊರೆಟ್ಟೊ ಕಡೆಗೆ ತೆರಳುತ್ತಿದ್ದ KA-19-AF-8073 ನೋಂದಣಿಯ ಟಿಪ್ಪರ್ ಲಾರಿಯನ್ನು ಪಲ್ಲಮಜಲು ನಿವಾಸಿ ಸಲ್ಮಾನ್ ಫಾರುಕ್ (33) ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ KA-70-H-5059 ನೋಂದಣಿಯ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಸ್ಕೂಟರ್ ಸವಾರ ಪಾಣೆಮಂಗಳೂರು ಸಮೀಪದ ಬೋರುಗುಡ್ಡೆ ದಯಾನಂದ ಹಾಗೂ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ನಾಯಿಲ ನಿವಾಸಿ ಯಶ್ವಂತ್ ಕುಲಾಲ್ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ನೆರವಿನಿಂದ ಇಬ್ಬರನ್ನೂ ತಕ್ಷಣ ಮಂಗಳೂರು ಜಿಲ್ಲಾ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಹಸವಾರ ಯಶ್ವಂತ್ ಕುಲಾಲ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಬಳಿಕ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ದಯಾನಂದ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಇಬ್ಬರಿಗೆ ಏರಿಕೆಯಾಗಿದೆ.
ಇವರಿಬ್ಬರು ಕೂಡ ಸಂಬಂಧಿಗಳಾಗಿದ್ದಾರೆ.
ಘಟನೆ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 99/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125(ಎ) ಹಾಗೂ 106(1) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಟಿಪ್ಪರ್ ಚಾಲಕ ಸಲ್ಮಾನ್ ಫಾರುಕ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಹಾಗೂ ಕಾನೂನು ಕ್ರಮ ಮುಂದುವರಿದಿದೆ.
ಈ ದುರ್ಘಟನೆ ಬಿ.ಸಿ.ರೋಡ್ ಪ್ರದೇಶದಲ್ಲಿ ಆತಂಕ ಮೂಡಿಸಿದ್ದು, ಎನ್.ಜಿ. ಸರ್ಕಲ್‌ನಲ್ಲಿ ಭಾರೀ ವಾಹನಗಳ ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.




