ಪತ್ನಿಯನ್ನು ಕೊಂದು ಫೇಸ್ಬುಕ್ ಲೈವ್ ನಲ್ಲಿ ಕಾರಣ ಹೇಳಿದ ಪತಿ
ಕೇರಳ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿಯನ್ನು ಕೊಂದು ಬಳಿಕ ಆರೋಪಿ ಗಂಡ ಫೇಸ್‌ಬುಕ್ ಲೈವ್‌ನಲ್ಲಿ ಕೊಲೆಗೆ ಕಾರಣ ತಿಳಿಸಿದ ಘಟನೆ ಕೇರಳದ ಪುನಲೂರು ಎಂಬಲ್ಲಿ ನಡೆದಿದೆ.
ಕೊಲೆಯಾದವರನ್ನು ಡಿಎಂಕೆ ಮಹಿಳಾ ಘಟಕದ ಕೊಲ್ಲಂ ಜಿಲ್ಲಾ ಕಾರ್ಯದರ್ಶಿ, ಕೊಲ್ಲಂನ ವಳಕ್ಕೋಡುವಿನ ಪ್ಲಾಚೇರಿಯ ಕೂತನಾಡಿ ನಿವಾಸಿ ಶಾಲಿನಿ (39) ಎಂದು ಗುರುತಿಸಲಾಗಿದ್ದು, ಆಕೆಯ ಆಕೆಯ ಪತಿ ಐಸಾಕ್ ಮ್ಯಾಥ್ಯೂ (44) ಪೊಲೀಸರಿಗೆ ಶರಣಾಗಿದ್ದಾನೆ.
ಸೋಮವಾರ ಬೆಳಿಗ್ಗೆ 6:30 ರ ಸುಮಾರಿಗೆ ಈ ಘಟನೆ ನಡೆದಿದೆ. ಅನುದಾನರಹಿತ ಶಾಲೆಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿರುವ ಶಾಲಿನಿ ಮತ್ತು ರಬ್ಬರ್ ಟ್ಯಾಪಿಂಗ್ ಕೆಲಸಗಾರ ಐಸಾಕ್ ನಡುವೆ ಸಣ್ಣಪುಟ್ಟ ವಿಷಯಗಳಿಗೆ ನಿಯಮಿತವಾಗಿ ಜಗಳವಾಡುತ್ತಿದ್ದರು.
ಶಾಲಿನಿ ಇತ್ತೀಚೆಗೆ ತನ್ನ ಪತಿಯೊಂದಿಗಿನ ಜಗಳಗಳ ನಂತರ ತಾಯಿ ಮನೆಗೆ ತೆರಳಿದ್ದರು. ಸೋಮವಾರ ಬೆಳಿಗ್ಗೆ ಕೆಲಸಕ್ಕೆ ಹೋಗಲು ಸಿದ್ಧವಾಗಲು ಮನೆಗೆ ಬಂದಿದ್ದ ಶಾಲಿನಿ ಮತ್ತು ಐಸಾಕ್ ನಡುವೆ ಮತ್ತೆ ಜಗಳವಾಗಿದೆ. ಈ ವೇಳೆ ಕೋಪದಲ್ಲಿ, ಇಸಾಕ್ ಶಾಲಿನಿಯ ಎದೆ ಮತ್ತು ಕುತ್ತಿಗೆಗೆ ಉಕ್ಕಿನ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ದಂಪತಿಯ ಹಿರಿಯ ಮಗ ಮನೆಯಲ್ಲಿದ್ದ, ಶಾಲಿನಿಯ ಕಿರುಚಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಓಡಿ ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಾಲಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲೇ ಆಕೆ ಸಾವನಪ್ಪಿದ್ದಳು.
ಘಟನೆಯ ನಂತರ ತಪ್ಪಿಸಿಕೊಂಡ ಐಸಾಕ್ ಹತ್ತಿರದ ರಬ್ಬರ್ ತೋಟದಿಂದ ಫೇಸ್‌ಬುಕ್‌ನಲ್ಲಿ ಲೈವ್ ಮಾಡಿದ್ದಾನೆ. ಈ ವೇಳೆ ಬೆಳಿಗ್ಗೆ ನಾನು ಹೆಂಡತಿಯನ್ನು ಕೊಂದಿದ್ದೇನೆ. ನನ್ನ ಹಿರಿಯ ಮಗ ಕ್ಯಾನ್ಸರ್ ರೋಗಿ, ಮತ್ತು ನನ್ನ ಹೆಂಡತಿ ಅವನ ಆರೋಗ್ಯದ ಬಗ್ಗೆ ಕಡಿಮೆ ಕಾಳಜಿ ವಹಿಸುತ್ತಾಳೆ. ರಾಜಕೀಯದಲ್ಲಿ ತೊಡಗಿಸಿಕೊಳ್ಳದಂತೆ ನಾನು ಅವಳಿಗೆ ಎಚ್ಚರಿಕೆ ನೀಡಿದ್ದೇನೆ, ಆದರೆ ಅವಳು ನನ್ನನ್ನು ನಿರ್ಲಕ್ಷಿಸಿದಳು. ನನ್ನ ಮನೆಯಿಂದ ಹೊರಗೆ ಹೋಗುವಂತೆ ನಾನು ಅವಳನ್ನು ಕೇಳಿಕೊಂಡಿದ್ದೇನೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ, ”ಎಂದು ಫೇಸ್‌ಬುಕ್‌ನಲ್ಲಿ ನೇರಪ್ರಸಾರದಲ್ಲಿ ಇಸಾಕ್ ಹೇಳಿದ್ದಾನೆ. ಬಳಿಕ ಆರೋಪಿ ಪುನಲೂರು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.





