ಅಕ್ರಮ-ಸಕ್ರಮ ಮಂಜೂರಾತಿಯಲ್ಲಿ ಸಂಜೀವ ಮಠಂದೂರು 2.50 ಲಕ್ಷ ರೂ. ಪಡೆದಿದ್ದಾರೆ: ಶಾಸಕ ಅಶೋಕ್ ಕುಮಾರ್ ರೈ ಗಂಭೀರ ಆರೋಪ
ಪುತ್ತೂರು: ಅಕ್ರಮ-ಸಕ್ರಮ ಮಂಜೂರಾತಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಭ್ರಷ್ಟಾಚಾರ ಎಸಗಿದ್ದಾರೆ. ಒಂದು ಎಕರೆ ಮಂಜೂರಾತಿಗೆ ಎರಡರಿಂದ ಎರಡೂವರೆ ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಹಾಲಿ ಶಾಸಕ ಅಶೋಕ್ ಕುಮಾರ್ ರೈ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಅವರಿಗೆ ದುಡ್ಡುಕೊಟ್ಟು 47 ಜನ ಈಗ ನನ್ನ ಬಳಿ ಇದ್ದಾರೆ. ಓರ್ವ ಮಹಿಳೆ ಹಸು ಮಾರಿ ಅವರಿಗೆ 70 ಸಾವಿರ ಕೊಟ್ಟಿದ್ದಾರೆ. ಈವರೆಗೂ ಮಂಜೂರಾತಿ ಮಾಡಿ ಕೊಟ್ಟಿಲ್ಲ. ಸುಮಾರು 150 ಕಡತಗಳಿಗೆ ಎಕರೆಗೆ 2 ಲಕ್ಷ ರೂ. ತೆಗೆದು ಕೊಂಡಿದ್ದು, 100 ಕಡತಗಳು ಇಂದಿಗೂ ನನ್ನ ಬಳಿ ಇವೆ. ನಾನೀಗ ಅದಕ್ಕೆ ಪ್ರತ್ಯೇಕ ಸಾಫ್ಟ್ ವೇರ್ ಮಾಡಿ ಅನ್ಯಾಯವಾದವರಿಗೆ ಮಾಡಿಸಿಕೊಡುತ್ತೇನೆ.
ಮಾಜಿ ಶಾಸಕರಿಗೆ ಮರ್ಯಾದಿ ಇದ್ದರೆ ತಾನು ಅಕ್ರಮ-ಸಕ್ರಮದಲ್ಲಿ ಹಣ ಮುಟ್ಟಿಲ್ಲ ಎಂದು ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಬಂದು ಪ್ರಾರ್ಥನೆ ಮಾಡಲಿ ಎಂದರು. ಅವರು ನನ್ನನ್ನು ಕೆಣಕಲು ಬರುವುದು ಬೇಡ. ಕೆಣಕಲು ಬಂದರೆ ಅವರ ಜಾತಕ ನಾನು ಬಯಲು ಮಾಡುತ್ತೇನೆ. ನಾನು ಅಕ್ರಮ ಸಕ್ರಮದಲ್ಲಿ ಒಂದು ರೂಪಾಯಿ ತೆಗೆದಿದ್ದಲ್ಲಿ ಮಹಾಲಿಂಗೇಶ್ವರ ನನಗೆ ಶಿಕ್ಷೆ ಕೊಡುತ್ತಾನೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.




