ಸ್ವಾತಂತ್ರೋತ್ಸವ ಭಾಷಣದಲ್ಲಿ RSSs ಅನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿ: ಸಾಂವಿಧಾನಿಕ ಮತ್ತು ಜಾತ್ಯತೀತ ಗಣತಂತ್ರ ವ್ಯವಸ್ಥೆಗೆ ತೋರಿದ ಅಗೌರವ: ಕಾಂಗ್ರೆಸ್ ಟೀಕೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವ ಭಾಷಣದಲ್ಲಿ ಆರ್‌ಎಸ್‌ಎಸ್ ಅನ್ನು ಹೊಗಳಿರುವುದು ಸಾಂವಿಧಾನಿಕ ಮತ್ತು ಜಾತ್ಯತೀತ ಗಣತಂತ್ರ ವ್ಯವಸ್ಥೆಗೆ ತೋರಿದ ಅಗೌರವವಾಗಿದೆ. ಸಂಘವನ್ನು ಓಲೈಸುವ ಸಲುವಾಗಿ ಇಂತಹ ಹತಾಶ ಪ್ರಯತ್ನ ಮಾಡಿದ್ದಾರೆ ಎಂದು ಎಂದು ಕಾಂಗ್ರೆಸ್ ಟೀಕಿಸಿದೆ.
79ನೇ ಸ್ವಾತಂತ್ರೋತ್ವದಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಮೋದಿ, ದೇಶವನ್ನುದ್ದೇಶಿಸಿ 103 ನಿಮಿಷ ಭಾಷಣ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್/ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಆತ್ಮನಿರ್ಭರ ಭಾರತ, ವಿಕಸಿತ ಭಾರತದ ಕುರಿತು ಪದೇ ಪದೇ ಹೇಳಿದ ಪ್ರಧಾನಿಯ ಮಾತುಗಳು ‘ಹಳಸಿದ, ಬೂಟಾಟಿಕೆಯಿಂದ ಕೂಡಿದ, ಅರ್ಥಹೀನವಾಗಿದ್ದವು’ ಎಂದಿದ್ದಾರೆ. ಹಾಗೆಯೇ, ‘ಪ್ರಧಾನಿ ಅವರು ಇಂದು ಸಾಕಷ್ಟು ಬಳಲಿದ್ದಾರೆ. ಶೀಘ್ರದಲ್ಲೇ ನಿವೃತ್ತಿಯಾಗಲಿದ್ದಾರೆ’ ಎಂದು ಕುಟುಕಿದ್ದಾರೆ.
‘ಪ್ರಧಾನಿಯವರ ಭಾಷಣದ ಅತ್ಯಂತ ಕಠಿಣವಾದ ಅಂಶವೆಂದರೆ, ಕೆಂಪುಕೋಟೆಯಿಂದ ಆರ್‌ಎಸ್‌ಎಸ್ ಹೆಸರನ್ನು ಉಲ್ಲೇಖಿಸಿದ್ದು. ಇದು, ಸಾಂವಿಧಾನಿಕ ಮತ್ತು ಜಾತ್ಯತೀತ ಗಣತಂತ್ರದ ಮನೋಭಾವದ ಸ್ಪಷ್ಟ ಉಲ್ಲಂಘನೆಯಾಗಿದೆ. ಮುಂದಿನ ತಿಂಗಳು ತಮ್ಮ 75ನೇ ಹುಟ್ಟುಹಬ್ಬ ಬರಲಿರುವುದರಿಂದ, ಅದಕ್ಕೂ ಮೊದಲು ಸಂಘವನ್ನು ಓಲೈಸುವ ಹತಾಶ ಪ್ರಯತ್ನ ನಡೆಸಿದ್ದಾರೆಯೇ ಹೊರತು ಬೇರೇನೂ ಅಲ್ಲ’ ಎಂದು ಟೀಕಿಸಿದ್ದಾರೆ.




