10 ವರ್ಷದ ಹಿಂದೆ ಧರ್ಮಸ್ಥಳಕ್ಕೆ ತೆರಳಿದ್ದ 17 ವರ್ಷದ ಬಾಲಕಿ ನಾಪತ್ತೆ: ಎಸ್ಐಟಿ ಗೆ ದೂರು ನೀಡಿದ ಸಹೋದರರು
ಬೆಳ್ತಂಗಡಿ:ಧರ್ಮಸ್ಥಳ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ ಐಟಿ ತನಿಖೆ ಮುಂದುವರೆಸಿದೆ. ಅದರ ನಡುವೆ ಎಸ್ಐಟಿ ಎದುರು ದೂರು ನೀಡಲು ಜನ ಮುಂದಾಗುತ್ತಿದ್ದಾರೆ. ಬಂಟ್ವಾಳ ತಾಲ್ಲೂಕಿನ ಕಾವಳ ಮೂಡೂರು ಗ್ರಾಮದ ಬಾಲಕಿಯೊಬ್ಬಳು 2012ರಲ್ಲಿ ನಾಪತ್ತೆಯಾದ ಬಗ್ಗೆ ಗುರುವಾರ ದೂರು ಸಲ್ಲಿಕೆ ಆಗಿದೆ.
ಬಾಲಕಿ ಹೇಮಾವತಿಯ ಅಣ್ಣ ನಿತಿನ್ ದೇವಾಡಿಗ ಅವರು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ನಮ್ಮ ತಂಗಿ ಧರ್ಮಸ್ಥಳಕ್ಕೆ ಹೋಗುತ್ತೇನೆ ಎಂದು ಹೇಳಿ 10 ವರ್ಷ ಹಿಂದೆ ಮನೆ ಸಮೀಪದ ಮಹಿಳೆಯೊಬ್ಬರ ಜೊತೆ ಹೋಗಿದ್ದವಳು ಇವರೆಗೂ ಮನೆಗೆ ಮರಳಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆವು. ಆದರೆ ಅವರು ದೂರು ಸ್ವೀಕರಿಸಿಲ್ಲ. ದೂರು ನೀಡಿದ ಕುರಿತ ದಾಖಲಾತಿಗಳೂ ಈಗ ನಮ್ಮಲ್ಲಿ ಇಲ್ಲ. ಕಾಣೆಯಾದಾಗ ತಂಗಿಗೆ 17 ವರ್ಷ’ ಎಂದು ಮಾಹಿತಿ ನೀಡಿದರು.
ಧರ್ಮಸ್ಥಳಕ್ಕೆ ತೆರಳಿದ್ದಾಗ ಕಾಣೆಯಾಗಿರುವವರ ಬಗ್ಗೆ ಮಾಹಿತಿ ಇದ್ದರೆ ಹಂಚಿಕೊಳ್ಳುವಂತೆ ಎಸ್‌ಐಟಿಯವರು ಪ್ರಕಟಣೆ ನೀಡಿದ್ದಾರೆ. ಹಾಗಾಗಿ ಎಸ್‌ಐಟಿ ಕಚೇರಿಗೆ ಬಂದು ದೂರು ನೀಡಿದ್ದೇವೆ. ತಂಗಿ ಏನಾದಳು, ಆಕೆಗೆ ಏನಾದರೂ ಹೆಚ್ಚು ಕಮ್ಮಿ ಆಗಿದೆಯೇ ಎಂಬುದು ನಮಗೆ ಗೊತ್ತಾಗಬೇಕು. ಮಗಳನ್ನು ಕಳೆದುಕೊಂಡ ನಮ್ಮ ತಾಯಿ ಈಗಲೂ ಕೊರಗುತ್ತಿದ್ದಾರೆ. ಆ ಚಿಂತೆಯಲ್ಲೇ ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ’ ಎಂದರು.
ಸಹೋದರಿಯು ಧರ್ಮಸ್ಥಳ ದೇವಸ್ಥಾನಕ್ಕೆ 2012ರಲ್ಲಿ ತೆರಳಿದ್ದು, ಬಳಿಕ ಮನೆಗೆ ಹಿಂತಿರುಗಿಲ್ಲ. ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಎಂದು ನಿವಾಸಿ ನಿತಿನ್ ದೇವಾಡಿಗ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.




