ತೆಂಗಿನ ಮರ ಬಿದ್ದು ಮಹಿಳೆ ಸಾವು
ಕೇರಳ: ತನ್ನ ಮಗುವಿಗೆ ಎದೆ ಹಾಲುಣಿಸುವಾಗ ತೆಂಗಿನ ಮರ ಬಿದ್ದು ಮಹಿಳೆಯೊಬ್ಬರು ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ಕೇರಳ ಕೋಯಿಕ್ಕೋಡ್‌ನಲ್ಲಿ ನಡೆದಿದೆ.
ವಾಣಿಮಲ್ ಮೂಲದ ಫಾಹಿಮಾ ಮೃತ ಮಹಿಳೆ. ಫಾಹಿಮಾ ಅವರ ಮನೆಯ ಬಳಿಯ ಹೊಲದಿಂದ ತೆಂಗಿನ ಮರವೊಂದು ಬಿದ್ದಿದೆ. ಅದೇ ಸಮಯದಲ್ಲಿ ಫಾಹಿಮಾ ತಮ್ಮ ಮನೆಯ ಹಿತ್ತಲಿನಲ್ಲಿ ಹಾಲುಣಿಸುತ್ತಿದ್ದರು. ಮರ ನೇರವಾಗಿ ಫಾಹಿಮಾ ಮೇಲೆ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಫಾಹಿಮಾ ಮೃತಪಟ್ಟಿದ್ದಾರೆ. ಇನ್ನು ಮಗು ಅಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.





