ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆ: ಒಂದು ದಿನ ಮುಷ್ಕರ ಮುಂದೂಡಲು ಆದೇಶ
ಬೆಂಗಳೂರು: ಹಿಂಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಂಗಳವಾರದಿಂದ ನಡೆಸಲು ಉದ್ದೇಶಿಸಿರುವ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಹೈಕೋರ್ಟ್ ತಡೆ ನೀಡಿದೆ.
ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಸುನೀಲ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಒಂದು ದಿನದ ಮಟ್ಟಿಗೆ ಮುಷ್ಕರ ನಡೆಸದಂತೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಆದೇಶಿಸಿತಲ್ಲದೆ, ಮುಖ್ಯಮಂತ್ರಿ ಹಾಗೂ ಸಾರಿಗೆ ಸಿಬ್ಬಂದಿಯೊಂದಿಗೆ ನಡೆಯುತ್ತಿರುವ ಸಂಧಾನ ಸಭೆಯ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರಕಾರದ ಪರ ವಕೀಲರಿಗೆ ನಿರ್ದೇಶಿಸಿತು.
ಅರ್ಜಿ ಸಂಬಂಧ ರಾಜ್ಯ ಸರಕಾರ, ಸಾರಿಗೆ ನಿಗಮ, ನಿಗಮಗಳ ಜಂಟಿ ಕ್ರಿಯಾ ಸಮಿತಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.ಇದಕ್ಕೂ ಮುನ್ನ ಕೆಲ ಕಾಲ ವಾದ ಆಲಿಸಿದ ಪೀಠ, ಪಿಐಎಲ್‌ಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠ ಇಂದು ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಅರ್ಜಿಯು ನಿಗದಿತ (ಸಿಜೆ ನೇತೃತ್ವದ) ನ್ಯಾಯಪೀಠದ ಮುಂದೆಯೇ ಬರಲಿ. ಅಲ್ಲಿಯವರೆಗೆ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಮುಂದೂಡುವಂತೆ ನೌಕರರ ಸಂಘಟನೆಗೆ ನಿರ್ದೇಶಿಸಲಾಗುವುದು ಎಂದು ತಿಳಿಸಿತು.





