ಹೋರಾಟ ಕೈಬಿಟ್ಟಿದ್ದೇನೆ ಎಂದ ಆಸಿಯಾ:
ಇಬ್ರಾಹಿಂ ಖಲೀಲ್ ಕಟ್ಟೆಕಾರ್-ಆಸಿಯಾ ಪ್ರಕರಣ ಅಂತ್ಯ
ಮಂಗಳೂರು: “ನಾನು ಹಲವು ರೀತಿಯಲ್ಲಿ ಹೋರಾಟ ನಡೆಸಿದರೂ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಮತ್ತು ಆತನ ಮನೆಯವರು ನನ್ನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದೆ ಇರುವುದರಿಂದ ಹೋರಾಟ ಮುಂದುವರಿಸದೇ ಇರಲು ನಿರ್ಧರಿಸಿದ್ದೇನೆ” ಎಂದು ಇಬ್ರಾಹಿಂ ಖಲೀಲ್ ಕಟ್ಟೆಕಾರ್ ತನ್ನನ್ನು ಮದುವೆಯಾಗಿದ್ದಾನೆಂದೂ, ಆತ ತನಗೆ ಪತ್ನಿಯ ಸ್ಥಾನ ನೀಡಬೇಕೆಂದೂ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಆಸಿಯಾರವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಘೋಷಣೆ ಮಾಡಿದ್ದು, ಖಲೀಲ್ ಕಟ್ಟೆಕಾರ್ ಮತ್ತು ಆಸಿಯಾ ಪ್ರಕರಣ ಅಂತ್ಯಗೊಂಡಂತಾಗಿದೆ.
ಅ.22 ರಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆಸಿಯಾರವರು ಇಬ್ರಾಹಿಮ್ ಖಲೀಲ್ ಕಟ್ಟೆಕಾರ್ ಮತ್ತು ನಾನು ಪರಸ್ಪರ ಪ್ರೀತಿಸಿದ್ದೆವು. ಖಲೀಲ್ ನನ್ನನ್ನು ಇಸ್ಲಾಂ ಪದ್ಧತಿ ಪ್ರಕಾರ ಮದುವೆಯಾಗಿದ್ದಾನೆ. ಈ ಮದುವೆಗಾಗಿ ನಾನು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದೆ. ಆದರೆ ಬಳಿಕ ಆತ ಮತ್ತು ಆತನ ಮನೆಯವರು ನನ್ನನ್ನು ಒಪ್ಪಿಕೊಳ್ಳಲು ನಿರಾಕರಿಸಿದರು.
ಆದ್ದರಿಂದ ಕಳೆದ 2 ವರ್ಷಗಳಿಂದ ನಾನು ಸುಳ್ಯಕ್ಕೆ ಬಂದು ಹೋರಾಟ ನಡೆಸಿದ್ದೆ. ಆದರೆ ಅವರು ನನ್ನನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಿದ್ಧರಿಲ್ಲ ದಿರುವುದರಿಂದ ಹೋರಾಟವನ್ನು ಮುಂದುವರಿಸದೆ ಇರಲು ನಿರ್ಧರಿಸಿದ್ದೇನೆ. ಇಬ್ರಾಹಿಂ ಖಲೀಲ್ ನಿಂದ ದೂರ ಉಳಿದು ಬದುಕುವ ನಿರ್ಧಾರಕ್ಕೆ ಬಂದಿದ್ದೇನೆ. ಅಲ್ಲದೆ ಪರಸ್ಪರ ಒಪ್ಪಿಗೆಯಿಂದ ದೂರವಾಗಲು ನಿರ್ಧರಿಸಿದ್ದೇವೆ ” ಎಂದು ಆಸಿಯಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“ಜಾತಿ ಮತ ಭೇದ ಮರೆತು ಅನೇಕ ಹಿಂದು ಮುಸ್ಲಿಂ ಸಂಘಟನೆಗಳು ನನ್ನ ಹೋರಾಟಕ್ಕೆ ಕೈಜೋಡಿಸಿ ನಮ್ಮನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದವು. ಆದರೆ ಇದ್ಯಾವುದಕ್ಕೂ ಬಗ್ಗದ ಇಬ್ರಾಹಿಂ ಖಲೀಲ್ ನನ್ನನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. 2 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ್ದೆ. 43 ದಿನ ಸುಳ್ಯದ ಕಟ್ಟೆಕಾರ್ ಕುಟುಂಬದ ಮನೆಯಲ್ಲಿ ವಾಸವಾಗಿದ್ದೆ. ಅವರ ಅಂಗಡಿಯಲ್ಲಿ ಹೋಗಿ ಕುಳಿತಿದ್ದೆ. ಆದರೆ ನನ್ನ ಮನವಿಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ಇದೀಗ ಅನಿವಾರ್ಯವಾಗಿ ಹೋರಾಟದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಮುಂದೆ ಸಮಾಜಸೇವೆ ಮಾಡಲು ನಿರ್ಧರಿಸಿದ್ದೇನೆ” ಎಂದು ಆಸಿಯಾ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್, ಹಾಜಿ ಇಬ್ರಾಹಿಂ ಕತ್ತಾರ್ ಮಂಡೆಕೋಲು, ಲತೀಫ್ ಗಾಂಧಿನಗರ ಉಪಸ್ಥಿತರಿದ್ದರು.




