ಅಧ್ಯಾಪಕರಿಂದ ಕಿರುಕುಳ: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ: ಇಬ್ಬರು ಅಧ್ಯಾಪಕರ ಬಂಧನ
ನೊಯ್ಡಾ: ಗ್ರೇಟರ್ ನೊಯ್ಡಾದ ಶಾರದಾ ವಿಶ್ವವಿದ್ಯಾಲಯದ ಎರಡನೇ ವರ್ಷದ ದಂತ ಶಸ್ತ್ರಚಿಕಿತ್ಸೆ (ಬಿಡಿಎಸ್) ವಿದ್ಯಾರ್ಥಿನಿ ಮಹಿಳಾ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಕೆಗೆ ಇಬ್ಬರು ಅಧ್ಯಾಪಕರು ಮಾನಸಿಕ ಕಿರುಕುಳ ನೀಡಿದ್ದರು ಎಂಬ ಆರೋಪ ಹೊರಿಸಲಾಗಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಗೌತಮ್ ಬುದ್ಧ ನಗರದ ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆತ್ಮಹತ್ಯೆಗೆ ಸಂಬಂಧಿಸಿದಂತೆ ಕ್ಯಾಂಪಸ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದ ಕಾರಣದಿಂದ ವಿಶ್ವವಿದ್ಯಾಲಯದ ಇಬ್ಬರು ಸಿಬ್ಬಂದಿಗಳಾದ ಮಹಿಂದರ್ ಮತ್ತು ಶೈರಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆ ಸ್ಥಳದಿಂದ ಒಂದು ಸೂಸೈಡ್ ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಆ ಯುವತಿ ತನ್ನ ಶಿಕ್ಷಕರ ಮೇಲೆ ಕಿರುಕುಳ ಮತ್ತು ಅವಮಾನದ ಆರೋಪ ಮಾಡಿದ್ದಾರೆ.
ತನ್ನ ಸೂಸೈಡ್ ನೋಟ್ನಲ್ಲಿ, ಪಿಸಿಪಿ ಮತ್ತು ಡೆಂಟಲ್ ಮೆಟೀರಿಯಲ್ಸ್‌ನ ಶಿಕ್ಷಕರು ತನ್ನ ಸಾವಿಗೆ ಕಾರಣರಾಗಿದ್ದಾರೆ. ಅವರು ತನಗೆ ಮಾನಸಿಕ ಕಿರುಕುಳ ನೀಡಿ, ಅವಮಾನ ಮಾಡಿದ್ದಾರೆ. ಇದರಿಂದಾಗಿ ಒತ್ತಡ ಉಂಟಾಗಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.




