ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ: ಯೆಲ್ಲೊ ಅಲರ್ಟ್ ಘೋಷಣೆ
ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು, ಇಂದು (ಆಗಸ್ಟ್ 7) ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆ ಭಾರೀ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವೆಡೆ ಭಾರೀ ಮಳೆ ಬೀಳುವ ಸಾಧ್ಯತೆ ಇದ್ದು, ಗಂಟೆಗೆ 40ರಿಂದ 50 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯೂ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲವೆಡೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಧಾರವಾಡ, ಹಾವೇರಿ ಹಾಗೂ ಯಾದಗಿರಿ ಜಿಲ್ಲೆಗಳ ಹಲವು ಕಡೆ ಹಗುರದಿಂದ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಮುಂಗಾರು ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಕರ್ನಾಟಕದ ಬಹುತೇಕ ಕಡೆ ಹಾಗೂ ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 9 ಸೆಂ.ಮೀ. ಮಳೆ ದಾಖಲಾಗಿದೆ.
ಆಗಸ್ಟ್ 8ರಂದು ಕೂಡ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ




