ಕತ್ತು ಸೀಳಿ ವಿದ್ಯಾರ್ಥಿನಿ ಕೊಲೆ: ಆರೋಪಿ ಅಭಿಷೇಕ್ ಪರಾರಿ
ಭೋಪಾಲ್: ಪ್ರಿಯಕರ ತನ್ನ ಪ್ರಿಯತಮೆಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರದ ಜಿಲ್ಲಾ ಆಸ್ಪತ್ರೆಯೊಳಗೆ ನಡೆದಿದೆ.
ಆರೋಪಿಯನ್ನು ಅಭಿಷೇಕ್ ಕೋಶ್ಟಿ ಹಾಗೂ ಮೃತ ವಿದ್ಯಾರ್ಥಿನಿಯನ್ನು ಟ್ರೈನಿ ನರ್ಸ್ ಆಗಿದ್ದ ಸಂಧ್ಯಾ ಚೌಧರಿ ಎಂದು ಗುರುತಿಸಲಾಗಿದೆ.
ಕೊಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಜೂ.27ರಂದು ಆಸ್ಪತ್ರೆಯ ತುರ್ತು ನಿಗಾ ಘಟಕದ ಬಳಿಕ ಈ ಕೃತ್ಯ ನಡೆದಿದೆ. ಮೊದಲಿಗೆ ಆರೋಪಿ ಆಸ್ಪತ್ರೆಗೆ ನುಗ್ಗಿ ಸಂಧ್ಯಾಳಿಗೆ ಕಪಾಳಮೋಕ್ಷ ಮಾಡಿ, ಬಳಿಕ ನೆಲಕ್ಕೆ ಬೀಳಿಸಿದ್ದಾನೆ. ಆಸ್ಪತ್ರೆಯಲ್ಲಿದ್ದ ರೋಗಿಗಳು, ವೈದ್ಯರು, ನರ್ಸ್ಗಳ ಮಧ್ಯೆಯೇ ಆಕೆಯ ಎದೆಯ ಮೇಲೆ ಕುಳಿತು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ತೀವ್ರ ರಕ್ತಸ್ರಾವವಾಗಿ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಆರೋಪಿ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುತ್ತಿದ್ದರೂ ಕೂಡ ಸುತ್ತಲಿನ ಜನರು ಯಾರೂ ಆಕೆಯ ಸಹಾಯಕ್ಕೆ ಬರದೇ ಹಾಗೆ ನೋಡುತ್ತಾ ನಿಂತಿರುವುದು ವೈರಲ್ ಆದ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಆಕೆಯನ್ನು ಹತ್ಯೆಮಾಡಿದ ಬಳಿಕ ತಾನೂ ಕತ್ತು ಸೀಳಿಕೊಳ್ಳಲು ಯತ್ನಿಸಿದ್ದು, ಅದು ವಿಫಲವಾಗಿದೆ. ಬಳಿಕ ಅಲ್ಲಿಂದ ಹೊರನಡೆದು ತನ್ನ ಬೈಕ್ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಈ ಘಟನೆಯಿಂದ ಭಯಭೀತರಾಗಿ ವಾರ್ಡ್‌ನಲ್ಲಿದ್ದ 11 ರೋಗಿಗಳ ಪೈಕಿ 8 ಜನ ಆ ದಿನವೇ ಡಿಸ್ಚಾರ್ಜ್ ಆಗಿ ಹೋದರು. ಇನ್ನುಳಿದವರು ಮಾರನೇ ದಿನ ಹೊರಟುಹೋದರು ಎಂದು ಮೂಲಗಳು ತಿಳಿಸಿವೆ.





