ವಿಟ್ಲ: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಮಹಾಶಕ್ತಿ ಕೇಂದ್ರ ವತಿಯಿಂದ ಪ್ರತಿಭಟನೆ
ವಿಟ್ಲ: ವಿಟ್ಲದಲ್ಲಿ ಇ ಖಾತೆ ಮಾಡಲು ತಿಂಗಳುಗಟ್ಟಲೆ ಒದ್ದಾಡಬೇಕು. ಕಾಂಗ್ರೆಸ್ ಸರಕಾರ ವೃದ್ಧಾಪ್ಯವೇತನ ರದ್ದುಪಡಿಸಿದೆ. ಭ್ರಷ್ಟ ಕಾಂಗ್ರೆಸ್ ಸರಕಾರ ನಾಡಿನ ಜನತೆಗೆ ಮೋಸ ಮಾಡಿದೆ. ಕೆಂಪುಕಲ್ಲು ಮರಳು ದರ ಏರಿಕೆಗೆ ಸರಕಾರದ ತಪ್ಪು ಧೋರಣೆ ಕಾರಣವಾಗಿದೆ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ. ಬಡವರಿಗೆ ಮತ್ತು ರೈತರಿಗೆ ನ್ಯಾಯ ಸಿಗುವುದಿಲ್ಲ. ಒಂದೇ ಒಂದು ಮನೆಗೆ ಅನುದಾನ ಈ ಸರಕಾರ ಬಿಡುಗಡೆ ಮಾಡಲಿಲ್ಲ ಎಂದು ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಆಗ್ರಹಿಸಿದರು.
ಅವರು ವಿಟ್ಲ ಪ.ಪಂ. ಮುಂಭಾಗದಲ್ಲಿ ಬಿಜೆಪಿಯ ವಿಟ್ಲ ಮಹಾ ಶಕ್ತಿ ಕೇಂದ್ರದ ನೇತೃತ್ವದಲ್ಲಿ ಬೆಲೆ ಏರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಮರಳು ಮತ್ತು ಕೆಂಪುಕಲ್ಲು ಅಭಾವದಿಂದ ಕಾರ್ಮಿಕರಿಗೆ ಕೆಲಸ ಇಲ್ಲದೇ ಹೋದದ್ದಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ವಿಟ್ಲ ಪ.ಪಂ.ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ ಮಾತನಾಡಿ, ಬಡವರನ್ನು ಬೀದಿಪಾಲು ಮಾಡುತ್ತಿದ್ದಾರೆ. 700 ರೂ. ದುಡಿಯುವ ಶ್ರಮಿಕನ ಖರ್ಚು ಒಂದು ಸಾವಿರಕ್ಕೇರಿದೆ. ಭ್ರಷ್ಟಾಚಾರ ನಿಲ್ಲಲಿಲ್ಲ. ರಾಜ್ಯ ಸರಕಾರ ಗ್ಯಾರೆಂಟಿ ಹೆಸರಿನಲ್ಲಿ ಬೆಲೆ ಏರಿಕೆ ಮಾಡಿ ಜನಸಾಮಾನ್ಯರನ್ನು ಕಷ್ಟಕ್ಕೆ ಸಿಲುಕಿಸಿದೆ ಎಂದು ಹೇಳಿದರು.
ಮುಖಂಡರಾದ ಅಶೋಕ್ ಕುಮಾರ್ ಶೆಟ್ಟಿ, ಮೋಹನದಾಸ ಉಕ್ಕುಡ, ಶಕ್ತಿ ಕೇಂದ್ರದ ಅಧ್ಯಕ್ಷ ಉದಯ ಕುಮಾರ್ ಆಲಂಗಾರು, ನರ್ಸಪ್ಪ ಪೂಜಾರಿ, ರಾಮದಾಸ ಶೆಣೈ, ಪ.ಪಂ.ಸದಸ್ಯರು ಮತ್ತಿತರರು ಭಾಗವಹಿಸಿದ್ದರು.





