ವಿಟ್ಲ: ವಾಹನ ದಟ್ಟನೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ: ಪ.ಪಂಚಾಯತ್, ಪೊಲೀಸ್ ಅಧಿಕಾರಿಗಳಿಂದ ಪಾರ್ಕಿಂಗ್ ಸ್ಥಳ ಪರಿಶೀಲನೆ
ವಿಟ್ಲ: ವಿಟ್ಲದಲ್ಲಿ ಸಂಭವಿಸುತ್ತಿರುವ ವಾಹನ ದಟ್ಟನೆ ನಿಯಂತ್ರಿಸಲು ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು, ವಿಟ್ಲ ಪೊಲೀಸರು ಜಂಟಿಯಾಗಿ ಪೇಟೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ವಿಟ್ಲ ಪೇಟೆಯಲ್ಲಿ ಸಂಭವಿಸುತ್ತಿರುವ ವಾಹನ ದಟ್ಟನೆಯನ್ನು ನಿಯಂತ್ರಿಸುವ ಉದ್ದೇಶದಿಂದ ಶನಿವಾರ ಪಟ್ಟಣ ಪಂಚಾಯತ್ ವತಿಯಿಂದ ಪೊಲೀಸ್, ಇಲಾಖೆ ಮತ್ತು ವಾಹನ ಚಾಲಕ ಸಭೆ ಕರೆದ ಈ ಹಿಂದೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಮುಂದುವರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಸೋಮವಾರ ಅಧಿಕಾರಿಗಳು ಪೇಟೆಯಲ್ಲಿ ಪರಿಶೀಲಿಸಿದರು.
ಪುಟ್ ಪಾತ್ ನಲ್ಲಿ ಅಂಗಡಿ ಸಾಮಾಗ್ರಿಗಳು ಇಟ್ಟಿರುವುದನ್ನು ತೆರವುಗೊಳಿಸಲು ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಯಿತು. ದೂರದ ಊರುಗಳಲ್ಲಿ ಕೆಲಸ ನಿರ್ವಹಿಸುವವರು ಬೆಳಿಗ್ಗೆ ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸಂಜೆ ಬಂದು ವಾಹನ ತೆಗೆಯುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಆಗುತ್ತಿದೆ ಎಂದು ಅಧಿಕಾರಿಗಳು ಸ್ಥಳದಲ್ಲಿದ್ದ ಸಾರ್ವಜನಿಕರು ತಿಳಿಸಿದರು. ಆದ್ದರಿಂದ ದೂರದ ಊರಿಗೆ ಕೆಲಸಕ್ಕೆ ಹೋಗುವವರು ರಸ್ತೆ ಸಂಚಾರಕ್ಕೆ ಅಡಚಣೆ ಆಗುವಂತೆ ವಾಹನ ನಿಲುಗಡೆ ಮಾಡಿದಲ್ಲಿ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರುಣಾಕರ ವಿ, ವಿಟ್ಲ ಠಾಣಾಧಿಕಾರಿ ರತನ್ ಕುಮಾರ್, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.




