ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ: ಬಿಜೆಪಿ ಸಚಿವ ವಿಜಯ್ ಶಾ ಕ್ಷಮೆಯಾಚನೆ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ, ಸಚಿವ ವಿಜಯ್ ಶಾ ಅವರ ಕ್ಷಮೆಯಾಚನೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಆಪರೇಷನ್ ಸಿಂದೂರ್ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮೂವರು ಸೇನಾ ಅಧಿಕಾರಿಗಳ ಪೈಕಿ ಒಬ್ಬರಾದ ಸೋಫಿಯಾ ಖುರೇಷಿ ವಿರುದ್ಧ ಹೇಳಿಕೆ ನೀಡಿರುವುದನ್ನು ಖಂಡಿಸಿದ ಸರ್ವೋಚ್ಛ ನ್ಯಾಯಾಲಯ ಕ್ಷಮೆಯಾಚನೆ “ಮೊಸಳೆ ಕಣ್ಣೀರು” ಎಂದು ಕರೆದು ಹೇಳಿಕೆಗಳು “ಸಂಪೂರ್ಣವಾಗಿ ಅಜಾಗರೂಕ” ಎಂದು ಎತ್ತಿ ತೋರಿಸಿದೆ.
ಸಚಿವರ ವಿರುದ್ಧ ದಾಖಲಾದ ಎಫ್‌ಐಆರ್ ತನಿಖೆಗಾಗಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ಸುಪ್ರೀಂ ಕೋರ್ಟ್ ರಚಿಸಿದ್ದು, ಅವರಲ್ಲಿ ಕನಿಷ್ಠ ಒಬ್ಬರು ಮಹಿಳೆಯಾಗಿರಬೇಕು ಎಂದು ನಿರ್ದಿಷ್ಟಪಡಿಸಿದೆ.
“ನೀವು ಸಂಪೂರ್ಣವಾಗಿ ಯೋಚಿಸದೆ ಕೀಳು ಹೇಳಿಕೆಗಳನ್ನು ನೀಡಿದ್ದೀರಿ. ಪ್ರಾಮಾಣಿಕ ಪ್ರಯತ್ನ ಮಾಡದಂತೆ ನಿಮ್ಮನ್ನು ತಡೆಯುವುದೇನು? ನಮಗೆ ನಿಮ್ಮ ಕ್ಷಮೆಯಾಚನೆ ಅಗತ್ಯವಿಲ್ಲ. ಕಾನೂನಿನ ಪ್ರಕಾರ ಹೇಗೆ ವ್ಯವಹರಿಸಬೇಕೆಂದು ನಮಗೆ ತಿಳಿದಿದೆ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.
”ಪಹಲ್ಗಾಮ್‌ನಲ್ಲಿ ನಡೆದ ಭ*ಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದಲ್ಲಿರುವ ಉ*ಗ್ರರ ಸಹೋದರಿಯನ್ನೇ ಕಳುಹಿಸಿದ್ದರು” ಎಂದು ವಿಜಯ್ ಶಾ ಸಾರ್ವಜನಿಕ ಹೇಳಿಕೆ ನೀಡಿದ್ದರು. ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.





