ಮಂಗಳೂರು: ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ ಪ್ರಕರಣ: ಪ್ರಮುಖ ಆರೋಪಿ ಪೊಲೀಸ್ ವಶಕ್ಕೆ
ಮಂಗಳೂರು: ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಪ್ರಕಟಣೆಯ ಪ್ರಕಾರ, ಆರೋಪಿಗಳು ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ದೂರುದಾರರೊಬ್ಬರಿಂದ 1.65 ಲಕ್ಷ ರೂ.ಗಳನ್ನು ವಂಚಿಸಿದ್ದರು. ಹೆಚ್ಚಿನ ತನಿಖೆಯ ವೇಳೆ ಆರೋಪಿಗಳು ಇದೇ ರೀತಿ ಹಲವಾರು ಯುವಕರನ್ನು ವಂಚಿಸಿದ್ದು, ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ಆಮಿಷ ಒಡ್ಡಿ ಒಟ್ಟು 1.82 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಯನ್ನು ಮುಂಬೈ ನಿವಾಸಿ ಅತಿವುಲ್ಲಾ ಖಾನ್ ಅವರ ಪುತ್ರ ಮಸಿವುಲ್ಲಾ ಅತಿವುಲ್ಲಾ ಖಾನ್ (36) ಎಂದು ಗುರುತಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಆರೋಪಿಯ ವಿರುದ್ದ ಈಗಾಗಲೇ ಯಾವುದೇ ರಹದಾರಿ ಪಡೆಯದೇ ಕಂಪೆನಿ ತೆರೆದು ವಿದೇಶದಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಇಮಿಗ್ರೇಷನ್ ಅಧಿಕಾರಿಗಳಿಂದ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 2024 ನೇ ಡಿಸೆಂಬರ್ ನಲ್ಲಿ ಪ್ರಕರಣ ದಾಖಲಾಗಿತ್ತು. ಎರಡೂ ಪ್ರಕರಣಗಳು ಮಂಗಳೂರು ಪೂರ್ವ ಪೊಲೀಸ್ ಠಾಣೆಯಿಂದ ಮುಂದಿನ ತನಿಖೆಯ ಬಗ್ಗೆ ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿದೆ.





