ಮಂಗಳೂರು: ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿ: ಪಾದಚಾರಿ ಸಾವು
ಮಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಪಾದಚಾರಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕುತ್ತಾರು ಸಮೀಪದ ಮದನಿ ನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಮುಂಡೋಳಿ ನಿವಾಸಿ, ಪ್ರಗತಿಪರ ಕೃಷಿಕ ದಿನೇಶ್ ಗಟ್ಟಿ (50) ಎಂದು ಗುರುತಿಸಲಾಗಿದೆ. ಮದನಿ ನಗರದ ಮುಖ್ಯ ರಸ್ತೆಯಲ್ಲಿ ದಿನೇಶ್ ಅವರು ರಸ್ತೆ ದಾಟುತ್ತಿದ್ದಾಗ, ಅತೀ ವೇಗದಿಂದ ಬಂದ ಬೈಕ್ ಸವಾರ ನಿಯಂತ್ರಣ ತಪ್ಪಿ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ.
ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಕೃಷಿಕರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.




