ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಕುಟುಂಬಕ್ಕೆ ಆಸ್ತಿಯಲ್ಲಿ ತೆರಿಗೆ ವಿನಾಯಿತಿ: ಪವನ್ ಕಲ್ಯಾಣ್
ಹೈದರಾಬಾದ್: ಭಾರತೀಯ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಕುಟುಂಬಕ್ಕೆ ಆಂಧ್ರಪ್ರದೇಶ ಸರ್ಕಾರ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದರಂತೆ ರಾಜ್ಯದ ಗ್ರಾಮ ಪಂಚಾಯತ್ ಮಿತಿಯೊಳಗೆ ಬರುವ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರಿದಂತೆ ಭಾರತೀಯ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಕುಟುಂಬಗಳಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಮಹತ್ವದ ಘೋಷಣೆಯನ್ನು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾಡಿದ್ದಾರೆ.
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಕೃತಜ್ಞತೆಯ ಸಂಕೇತವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪವನ್ ಕಲ್ಯಾಣ್ ಸಾಮಾಜಿಕ ಮಾಧ್ಯಮ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಮ್ಮ ಧೈರ್ಯಶಾಲಿ ಸೈನಿಕರಿಗೆ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿ, ಆಂಧ್ರಪ್ರದೇಶದ ಎನ್‌ಡಿಎ ಸರ್ಕಾರವು ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ, ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತ್ ಮಿತಿಯೊಳಗಿನ ಭಾರತೀಯ ರಕ್ಷಣಾ ಪಡೆಗಳ ಸಿಬ್ಬಂದಿಯ ಮನೆಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರವು ನಮ್ಮ ದೇಶದ ಭದ್ರತೆಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಡುವ ನಮ್ಮ ರಕ್ಷಣಾ ಪಡೆಗಳು, ಭೂಸೇನೆ, ನೌಕಾಪಡೆ, ವಾಯುಪಡೆ, ಅರೆಸೇನಾ ಪಡೆ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯ ಅಚಲ ಧೈರ್ಯವನ್ನು ಗೌರವಿಸುತ್ತದೆ ಎಂದು ಅವರು ಹೇಳಿದರು.




