ಬೆಳಗಾವಿ: ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಸುಟ್ಟು ಹಾಕಿದ ಕಿಡಿಗೇಡಿಗಳು
ಬೆಳಗಾವಿ: ಮಸೀದಿಯಲ್ಲಿದ್ದ ಕುರಾನ್ ಪುಸ್ತಕ ಕದ್ದೊಯ್ದು ಸುಟ್ಟು ಹಾಕಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದ ನಿರ್ಮಾಣ ಹಂತದ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಪುಸ್ತಕವನ್ನು ಕದ್ದೊಯ್ದು ಸುಟ್ಟು ಹಾಕಲಾಗಿದೆ. ಇಂದು ಪ್ರಾರ್ಥನೆಗೆಂದು ಬಂದಾಗ ಕುರಾನ್, ಹದೀಸ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಪ್ರಾರ್ಥನೆ ಮುಗಿಸಿದ ಬಳಿಕ ಸುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಸುಟ್ಟು ಹಾಕಿರುವುದು ಕಂಡುಬಂದಿದೆ. ಇದೀಗ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿ, ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿದರು. ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಗ್ರಾಮಸ್ಥರನ್ನು ಸಮಾಧಾನ ಪಡೆಸಿ, ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದರು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





