ಆಪರೇಷನ್ ಸಿಂಧೂರ: ಮಾಧ್ಯಮ ವಿವರಣೆ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಸೊಸೆ
ಬೆಳಗಾವಿ: ಕಳೆದ ಎರಡು ದಿನದಿಂದ ದೇಶದಾದ್ಯಂತ ಸುದ್ದಿಯಾಗುತ್ತಿರುವ ಹಾಗೂ ಭಾರತೀಯರು ಹೆಮ್ಮೆಯಿಂದ & ಗರ್ವದಿಂದ ಹೇಳುತ್ತಿರುವ ಹೆಸರು “ಕರ್ನಲ್ ಸೋಫಿಯಾ ಖುರೇಷಿ” ಮತ್ತೊಂದು ವಿಶೇಷವೆಂದರೆ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಮುದ್ದು ಸೊಸೆ.

ಭಾರತೀಯ ಸೇನೆಯ ಸೋಫಿಯಾ ಖುರೇಷಿ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ ಎನ್ನಲಾಗಿದ್ದು. ಇವರು ಸಹ ಈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಸಿಗ್ನಲ್ಸ್ ನ ಅತ್ಯಂತ ಗೌರವಾನ್ವಿತ ಅಧಿಕಾರಿಣಿಯಾಗಿರುವ ಕರ್ನಲ್ ಸೋಫಿಯಾ ಖುರೇಶಿ ಬೆಳಗಾವಿಯ ಸೊಸೆ ಎಂಬುದು ಕನ್ನಡಿಗರ ಹೆಮ್ಮೆಯಾಗಿದೆ.
ಸೋಫಿಯಾ ಖುರೇಶಿಯವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದವರು. ಅವರು ಯಾಂತ್ರೀಕೃತ ಪದಾತಿ ದಳದಲ್ಲಿ ಅಧಿಕಾರಿಯಾಗಿದ್ದಾರೆ.
ಕರ್ನಲ್ ಸೋಫಿಯಾ ಖುರೇಶಿ ಗುಜರಾತ್ ರಾಜ್ಯದ ಬರೋಡಾದವರು. ಇವರು ಬಲವಾದ ಮಿಲಿಟರಿ ಹಿನ್ನೆಲೆಯನ್ನು ಹೊಂದಿದ್ದಾರೆ. 2016ರಲ್ಲಿ ಮಿಲಿಟರಿ ಸಮರಾಭ್ಯಾಸದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾಗಿ ಇತಿಹಾಸವನ್ನು ಸೃಷ್ಟಿಸಿದ್ದರು.
ಜೀವರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೋಫಿಯಾ ಖುರೇಶಿ, 1999ರಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡಮಿಯಿಂದ ಲೆಫ್ಟಿನಂಟ್ ಆಗಿ ಸೇನೆಗೆ ಸೇರ್ಪಡೆಗೊಂಡಿದ್ದರು.
ಬುಧವಾರ ಮುಂಜಾನೆ ಭಾರತೀಯ ಸೇನಾಪಡೆ ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿನ ಉಗ್ರಗಾಮಿಗಳ ಎಷ್ಟು ನೆಲೆಗಳನ್ನು ಹೇಗೆ ಧ್ಚಂಸಗೊಳಿಸಿದೆ? ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಉದ್ದೇಶ ಏನು, ಎಷ್ಟರ ಮಟ್ಟಿಗೆ ಅದು ಯಶಸ್ಸು ಸಾಧಿಸಿದೆ ಎಂಬುದರ ವಿವರವನ್ನು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಉಪಸ್ಥಿತಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜೊತೆ ಕರ್ನಲ್ ಸೋಫಿಯಾ ಖುರೇಶಿ ನೀಡಿದ್ದರು.
ಪ್ರೇಮ ವಿವಾಹ:
ಕರ್ನಲ್ ಸೋಫಿಯಾ ಖುರೇಷಿ ಮತ್ತು ತಾಜುದ್ದೀನ್ ಬಾಗೇವಾಡಿ ಅವರಿಬ್ಬರು 2015ರಲ್ಲಿ ಪ್ರೀತಿಸಿ ವಿವಾಹವಾಗಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಅವರು ಮೂಲತಃ ಗುಜರಾತ್ ರಾಜ್ಯದ ಬರೋಡಾದವರು. ಪತಿ ಮತ್ತು ಪತ್ನಿ ಇಬ್ಬರೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೋಫಿಯಾ ಖುರೇಷಿ ಅವರು ಜಮ್ಮುವಿನಲ್ಲಿ ಕರ್ನಲ್ ಆಗಿದ್ದಾರೆ. ಪತಿ ತಾಜುದ್ದೀನಿ ಬಾಗೇವಾಡಿ ಸಹ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.




