March 12, 2026

ತೆಕ್ಕಾರು: ಪ್ರಚೋದನಕಾರಿ ಭಾಷಣ: ‘FIR’ ರದ್ದುಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಶಾಸಕ ಹರೀಶ್ ಪೂಂಜಾ

0
Harish_vb_47.jpeg

ಬೆಂಗಳೂರು: ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮ ಕಲಶೋತ್ಸವದಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಇತ್ತೀಚಿಗೆ ಅವರ ವಿರುದ್ಧ FIR ದಾಖಲಾಗಿತ್ತು. ಇದೀಗ ಎಫ್‌ಐಆರ್ ರದ್ದು ಪಡಿಸುವಂತೆ ಹೈಕೋರ್ಟಿಗೆ ಶಾಸಕ ಹರೀಶ್ ಪೂಂಜಾ ಅರ್ಜಿ ಸಲ್ಲಿಸಿದ್ದಾರೆ.

ಸಮಾಜದಲ್ಲಿ ಕೋಮು ದ್ವೇಷ ಹರಡಿದ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆ ರದ್ಧತಿ ಕೋರಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತೆಕ್ಕಾರುವಿನ ಎಸ್.ಬಿ.ಇಬ್ರಾಹಿಂ ಸಲ್ಲಿಸಿರುವ ದೂರಿನ ಆಧಾರದಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಹರೀಶ್ ಪೂಂಜಾ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಅವರ ಪರ ವಕೀಲರು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಮುಂದೆ ಪ್ರಸ್ತಾಪಿಸಿದರು.

ಇದಕ್ಕೆ ಪೀಠ, ಇದು ಜನಪ್ರತಿನಿಧಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ಈ ನ್ಯಾಯಾಲಯಕ್ಕೆ ಆ ವ್ಯಾಪ್ತಿ ಇಲ್ಲ. ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗಳಿಂದ ನಿರ್ದೇಶನ ಪಡೆದು, ಆದೇಶವಾದರೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ತೆಕ್ಕಾರುವಿನ ಭಟ್ರಬೈಲು ಎಂಬಲ್ಲಿ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮ ಕಲಶೋತ್ಸವದಲ್ಲಿ ಮೇ 3ರಂದು ಹರೀಶ್ ಪೂಂಜಾ ಅವರು ತುಳು ಭಾಷೆಯಲ್ಲಿ “ತೆಕ್ಕಾರಿನ ಕಂತ್ರಿ ಬ್ಯಾರಿಗಳು ಟ್ಯೂಬ್ಲೈಟ್ ಒಡೆದಿದ್ದಾರೆ. ಜನರೇಟರ್ನ ಡೀಸೆಲ್ ಕದ್ದಿದ್ದಾರೆ ಎಂಬ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂದಿದೆ. ಬ್ರಹ್ಮಕಲಶೋತ್ಸವ ಮುಗಿಯುವ ವೇಳೆಗೆ ಕದ್ದಿರುವವರು ಯಾರು ಎಂಬ ಮಾಹಿತಿ ಬರುತ್ತದೆ. ನಮ್ಮಲ್ಲಿ ಸೌಹಾರ್ದತೆ ಬೇಕು. ನಾವು ಮಸೀದಿಗೆ ಹೋಗಿ ಆಮಂತ್ರಣ ಕೊಟ್ಟಿದ್ದರಿಂದ ಬ್ಯಾರಿಗಳು ಟ್ಯೂಬ್ ಒಡೆದಿದ್ದಾರೆ. ಅವರಿಗೆ ಆಮಂತ್ರಣ ನೀಡಬಾರದಿತ್ತು. ಕಾರ್ಯಕ್ರಮಕ್ಕೆ ಕರೆಯಬಾರದಿತ್ತು” ಎಂದು ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!