ಈಶ್ವರಪ್ಪ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶ

ಬೆಂಗಳೂರು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕುರಿತಂತೆ ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
2016ರಲ್ಲಿ ವಕೀಲ ಬಿ.ವಿನೋದ್ ಎಂಬವರು ಕೆ.ಎಸ್.ಈಶ್ವರಪ್ಪ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಆದಾಯ ಮೀರಿ ಆಸ್ತಿಗಳಿಸಿದ್ದಾರೆ ಎಂದು ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ಆದರೆ, ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯ ಖಾಸಗಿ ದೂರು ಸಮರ್ಕವಾಗಿಲ್ಲವೆಂದು ವಜಾಗೊಳಿಸಿತ್ತು. ವಜಾ ಆದೇಶ ಪ್ರಶ್ನಿಸಿ ಬಿ.ವಿನೋದ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ 2020ರಲ್ಲಿ ದೂರನ್ನು ಮರು ಪರಿಗಣನೆಗೆ ತೆಗೆದುಕೊಳ್ಳುವಂತೆ ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯಕ್ಕೆ ಆದೇಶಿಸಿತ್ತು. ನಂತರ, ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.