ಕರೆಂಟ್ ಶಾಕ್ ತಗುಲಿ ಬಾಲಕ ಸಾವು: ಶವಕ್ಕೆ ಕಲ್ಲುಗಳನ್ನು ಕಟ್ಟಿ ಕೆರೆಗೆ ಎಸೆದ ಸ್ನೇಹಿತರು
ರಾಯಚೂರು: ಹೊಸ ಬಟ್ಟೆ ಖರೀದಿಗೆ ಸ್ನೇಹಿತರೊಂದಿಗೆ ಹೋದ 9 ನೇ ತರಗತಿ ಬಾಲಕನೊಬ್ಬ ಕರೆಂಟ್ ಶಾಕ್ ತಗುಲಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ನಡೆದಿದೆ. ಗುಂಡಸಾಗರ ಗ್ರಾಮದ ಕಾರ್ತಿಕ್(15) ಮೃತಪಟ್ಟ ಬಾಲಕ.
ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದ್ದು, ಈ ಹಿನ್ನೆಲೆ ಹೊಸ ಬಟ್ಟೆ ಖರೀದಿಗೆ ತನ್ನ ಇಬ್ಬರು 10ನೇ ತರಗತಿಯ ಸ್ನೇಹಿತರ ಜತೆ ಕಾರ್ತಿಕ್ ಕೂಡ ಹೋಗಿದ್ದ ಎನ್ನಲಾಗಿದೆ.
ದಾರಿ ಮಧ್ಯೆ ಬಾಯಾರಿಕೆಯಾಗಿದ್ದು, ಬಾವಿಯಲ್ಲಿ ನೀರು ಕುಡಿಯಲು ಹೋದಾಗ ಕಾರ್ತಿಕ್‌ಗೆ ಕರೆಂಟ್ ಶಾಕ್ ತಗುಲಿದ್ದು, ಕಾರ್ತಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮೃತಪಟ್ಟ ಬಳಿಕ ಗಾಬರಿಗೊಂಡ ಆತನ ಸ್ನೇಹಿತರು, ವಿಷಯ ಯಾರಿಗೂ ತಿಳಿಯದಂತೆ ಮಾಡಲು ಶವಕ್ಕೆ ಕಲ್ಲುಗಳನ್ನು ಕಟ್ಟಿ, ಗೋಣಿ ಚೀಲದಲ್ಲಿ ಹಾಕಿ ಕೆರೆಗೆ ಎಸೆದಿದ್ದಾರೆ.




