ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ: ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ವಿರುದ್ಧ FIR

ಬೆಂಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಮತ್ತು ಹಲ್ಲೆ ಮಾಡಿದ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಸೇರಿ ಅವರ ಕುಟುಂಬದ ನಾಲ್ವರ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಬಾವಿ ನಿವಾಸಿ ಪಿಎಸ್‌ಐ ಪತ್ನಿ ವರ್ಷಾ (27) ನೀಡಿದ ದೂರಿನ ಮೇರೆಗೆ ಪಿಎಸ್‌ಐ ಪಿ.ಕಿಶೋರ್, ಅವರ ಸಹೋದರ ಪಿ.ಚಂದನ್, ಪೋಷಕರಾದ ಪುಟ್ಟಚನ್ನಪ್ಪ, ಸರಸ್ವತಮ್ಮ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ವರದಕ್ಷಿಣೆ ತರುವಂತೆ ಪದೇ ಪದೇ ಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ’ ಎಂದು ಆರೋಪಿಸಿ, ವರ್ಷಾ ಅವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪುಟ್ಟಚನ್ನಪ್ಪ ಕುಟುಂಬವು ನೆಲೆಸಿದೆ. 2024ರ ಫೆಬ್ರವರಿ 21ರಂದು ಪಿಎಸ್‌ಐ ಕಿಶೋರ್ ಜತೆ ವರ್ಷಾ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ₹10 ಲಕ್ಷ ನಗದು, ಹುಡುಗನಿಗೆ 135 ಗ್ರಾಂ ಚಿನ್ನದ ಆಭರಣ, ನನಗೆ 850 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ ಆಭರಣ ನೀಡಿದ್ದರು. ಅದ್ದೂರಿಯಿಂದ ಮದುವೆ ಮಾಡಿಕೊಡಲು ಪೋಷಕರು ₹60 ಲಕ್ಷ ಖರ್ಚು ಮಾಡಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.