ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ದಂಪತಿ ಆತ್ಮಹತ್ಯೆ

ಹೈದರಾಬಾದ್: ಹಣಕಾಸು ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಇಬ್ಬರು ಮಕ್ಕಳು ಕೂಡ ಶವವಾಗಿ ಪತ್ತೆಯಾದ ಘಟನೆ ಹೈದರಾಬಾದ್‌ನ ಹಬ್ಸಿಗುಡದಲ್ಲಿ ನಡೆದಿದೆ.
ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಕ್ಕಳನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗಂಡ-ಹೆಂಡತಿಯ ಮೃತದೇಹ ಬೇರೆಬೇರೆ ಕೋಣೆಗಳಲ್ಲಿ ಪತ್ತೆಯಾಗಿದ್ದು, ಅಪ್ರಾಪ್ತ ಮಕ್ಕಳು ಬೆಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಹಬ್ಸಿಗುಡ ಪ್ರದೇಶದ ರವೀಂದ್ರನಗರ ಕಾಲೋನಿಯಲ್ಲಿರುವ ನಿವಾಸದಲ್ಲಿ ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಬಳಿಕ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಂಪತಿ ಮೊದಲು ತಮ್ಮ ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ನೇಣು ಹಾಕಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಉಸ್ಮಾನಿಯಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್ ರಾಜೇಂದರ್ ತಿಳಿಸಿದ್ದಾರೆ.