ಅಡುಗೆ ವಿಚಾರಕ್ಕೆ ಅತ್ತೆ ಸೊಸೆ ಜಗಳ: ನೊಂದ ಸೊಸೆ ನೇಣು ಬಿಗಿದು ಆತ್ಮಹತ್ಯೆ
ಬೆಂಗಳೂರು: ಅತ್ತೆ ಸೊಸೆ ಜಗಳದಲ್ಲಿ ಸಾಪ್ಟವೇರ್ ಎಂಜಿನಿಯರ್ ಸೊಸೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಅಬ್ಬಿಗೆರೆ ಪ್ರದೇಶದಲ್ಲಿ ನಡೆದಿದೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ಮಹಿಳೆ ಸುಶ್ಮಾ (35) ಅವರು Dell Technologies ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಐದು ವರ್ಷಗಳ ಹಿಂದೆ ಪುನೀತ್ ಕುಮಾರ್ ಅವರನ್ನು ವಿವಾಹವಾಗಿ ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಸಣ್ಣಪುಟ್ಟ ವಿಷಯಗಳ ಕುರಿತು ಆಗಾಗ್ಗೆ ಕಲಹಗಳು ನಡೆಯುತ್ತಿದ್ದವು ಎನ್ನಲಾಗಿದೆ. ಮಂಗಳವಾರ ಅತ್ತೆ ಕಲ್ಪನಾ ಅವರೊಂದಿಗೆ ಅಡುಗೆ ವಿಚಾರವಾಗಿ ವಾಗ್ವಾದ ಉಂಟಾಗಿತ್ತು. ಸುಶ್ಮಾ ಅವರ ಕುಟುಂಬದವರ ಆರೋಪದಂತೆ, ಅತ್ತೆ ಪದೇಪದೇ ಅಡುಗೆ ಮತ್ತು ಇತರೆ ವಿಷಯಗಳಲ್ಲಿ ಕಿರುಕುಳ ನೀಡುತ್ತಿದ್ದರೆಂದು ತಿಳಿದುಬಂದಿದೆ.
ಈ ಪರಿಸ್ಥಿತಿಯಿಂದ ಮಾನಸಿಕವಾಗಿ ನೊಂದ ಸುಶ್ಮಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ. ವರದಕ್ಷಿಣೆ ಕಿರುಕುಳದ ಆರೋಪದ ಮೇರೆಗೆ ಪತಿ ಪುನೀತ್ ಕುಮಾರ್ ಅವರನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಅತ್ತೆ ಕಲ್ಪನಾ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೂರ್ವಾಪರ ವಿಚಾರಗಳನ್ನು ಪೊಲೀಸರು ಸವಿಸ್ತಾರವಾಗಿ ಪರಿಶೀಲಿಸುತ್ತಿದ್ದಾರೆ.




